ಬಿಜೆಪಿ-ಜೆಡಿಎಸ್‌ನಿಂದ ಧರ್ಮಸ್ಥಳಕ್ಕೆ ಕಳಂಕ ತರುವ ಪ್ರಯತ್ನ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ

ಬೆಂಗಳೂರು : ಬಿಜೆಪಿ, ಜೆಡಿಎಸ್ ರಾಜ್ಯದಲ್ಲಿ ಕೋಮುವಾದವನ್ನು ಸೃಷ್ಟಿಸಲು ಹಾಗೂ ಧರ್ಮಸ್ಥಳವನ್ನು ರಾಜಕೀಯಕ್ಕಾಗಿ ದುರುಪಯೋಗಪಡಿಸಿಕೊಂಡು ಕ್ಷೇತ್ರಕ್ಕೆ ಕಳಂಕ ತರುವ ಪ್ರಯತ್ನವನ್ನು ಮಾಡುತ್ತಿರುವುದನ್ನು ಖಂಡಿಸಿ, ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಈ ವೇಳೆ ಮಾತನಾಡಿದ ಕೆಪಿಸಿಸಿ ಪ್ರದಾನ ಕಾರ್ಯದರ್ಶಿ ಎಸ್.ಮನೋಹರ್, ಸಂಸದ ತೇಜಸ್ವಿ ಸೂರ್ಯ ಅವರು ಎಸ್‌ಐಟಿ ಅಧಿಕಾರಿಗಳು ಅಲ್ಲಿ ನಡೆಯುತ್ತಿರುವ ಬೆಳವಣಿಗೆ ಬಗ್ಗೆ ನನಗೆ ಮಾಹಿತಿ ನೀಡಿದ್ದಾರೆ ಎಂದು ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಕೂಡಲೇ ತೇಜಸ್ವಿ ಸೂರ್ಯ ವಿರುದ್ಧ ಅಗತ್ಯ ಕಾನೂನು ಕ್ರಮ ವಹಿಸಬೇಕು ಎಂದರು.
ಭ್ರಷ್ಟಾಚಾರದಲ್ಲಿ ಮುಳುಗಿರುವ ಬಿಜೆಪಿ ನಾಯಕರು ಧರ್ಮಸ್ಥಳವನ್ನು ಪ್ರವೇಶ ಮಾಡುವುದರ ಮೂಲಕ ಅಪವಿತ್ರಗೊಳಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ರಾಜ್ಯ ಸರಕಾರ ವಿಶೇಷ ತನಿಖಾ ತಂಡ ರಚನೆ ಮಾಡಿ ತನಿಖೆ ನಡೆಸುತ್ತಿದೆ. ತನಿಖಾ ವರದಿ ಬರುವ ಮುಂಚೆಯೇ ಬಿಜೆಪಿಯವರು ಸುಳ್ಳು ಮಾಹಿತಿಗಳನ್ನು ಹರಡಿ ರಾಜ್ಯದ ಜನರಲ್ಲಿ ಗೊಂದಲವನ್ನು ಸೃಷ್ಟಿಸುತ್ತಿದ್ದಾರೆ ಎಂದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಎ.ಆನಂದ್, ಎಂ.ಎ ಸಲೀಮ್, ಜಿ.ಪ್ರಕಾಶ್, ಪುಟ್ಟರಾಜು, ಹೇಮರಾಜ್, ಕುಶಾಲ್ ಹರುವೇಗೌಡ, ನವೀನ್ ಸುಂಕದಕಟ್ಟೆ, ಉಮೇಶ್, ಚಿನ್ನಿಪ್ರಕಾಶ್, ಓಬಳೇಶ್, ಪ್ರವೀಣ್ ರಾವ್, ನವೀನ್ ಸಾಯಿ, ಪವನ್ ಬಿರೇಶ್, ಅಜಯ್ ಮತ್ತಿತರರು ಉಪಸ್ಥಿತರಿದ್ದರು.







