‘ಮಾದಿಗ-ಮೇತ್ರಿ’ ಸಮುದಾಯದ ವಿವಾದ ಇತ್ಯರ್ಥಕ್ಕೆ ಸರಕಾರ ಬದ್ಧ : ಕೆ.ಎಚ್.ಮುನಿಯಪ್ಪ

ಬೆಂಗಳೂರು, ಸೆ.2: ಮೂಲತಃ ಮಾದಿಗ ಸಮುದಾಯದವರಾಗಿದ್ದರೂ, ದಾಖಲೆಗಳಲ್ಲಿ ತಪ್ಪಾಗಿ ಮೇತ್ರಿ ಎಂದು ಸೇರಿಸಿದ ಅನ್ಯಾಯವನ್ನು ಸರಿಪಡಿಸಲು ಸರಕಾರ ಬದ್ಧವಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಭರವಸೆ ನೀಡಿದರು.
ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನಿಂದ ನೂರಾರು ಜನರು ಬೆಂಗಳೂರಿಗೆ ಬಂದು ತಮ್ಮ ತಮ್ಮ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಿದ್ದು, 1980ರ ನಂತರ ತಪ್ಪಾಗಿ ‘ಮೇತ್ರಿ’ ಹೆಸರಿನಲ್ಲಿ ಪ್ರಮಾಣ ಪತ್ರ ನೀಡುತ್ತಿರುವುದರಿಂದ ಸಾವಿರಾರು ಜನರು ಶಿಕ್ಷಣ ಮತ್ತು ಉದ್ಯೋಗಾವಕಾಶಗಳಲ್ಲಿ ವಂಚಿತರಾಗಿರುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು.
ನ್ಯಾ.ಎಚ್.ಎನ್. ನಾಗಮೋಹನ ದಾಸ್ ಸಮೀಕ್ಷೆಯಲ್ಲಿಯೆ ಸ್ಪಷ್ಟವಾಗಿ ‘ಮಾದಿಗ’ ಎಂಬ ವರ್ಗಕ್ಕೆ ಸೇರಿದವರೆ ಎಂದು ದಾಖಲಿಸಲಾಗಿದೆ. ಆದರೂ ಸ್ಥಳೀಯ ಅಧಿಕಾರಿಗಳು ಪ್ರಮಾಣ ಪತ್ರ ನೀಡಲು ನಿರಾಕರಿಸುತ್ತಿದ್ದಾರೆ. ಇದು ಸರಕಾರ ತಕ್ಷಣವೆ ಸರಿಪಡಿಸಬೇಕಾದ ವಿಷಯವಾಗಿದೆ ಎಂದು ಮುನಿಯಪ್ಪ ತಿಳಿಸಿದರು.
ಸರಕಾರ ಈಗಾಗಲೇ 59ನೆ ವರ್ಗದಲ್ಲಿ ‘ಅತೀ ಹಿಂದುಳಿದ(ಮೋಸ್ಟ್ ಬ್ಯಾಕ್ವರ್ಡ್)’ ಪಟ್ಟಿಯಲ್ಲಿ ಸೇರಿಸಿದೆ. ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿ ತಕ್ಷಣವೆ ಪ್ರಮಾಣ ಪತ್ರ ನೀಡುವಂತೆ ಕ್ರಮ ಕೈಗೊಳ್ಳುತ್ತೇವೆ. ಮುಖ್ಯಮಂತ್ರಿ ಹಾಗೂ ಸಮಾಜ ಕಲ್ಯಾಣ ಸಚಿವರ ಗಮನಕ್ಕೂ ತರುತ್ತೇನೆ ಎಂದು ಅವರು ಹೇಳಿದರು.
ಪರಿಶಿಷ್ಠ ಜಾತಿಯ 101 ಜಾತಿಗಳಲ್ಲಿ ಯಾರಿಗಾದರೂ ಅನ್ಯಾಯವಾಗಿದ್ದರೆ ಸರಕಾರ ಪರಿಶೀಲನೆ ನಡೆಸಿ ನ್ಯಾಯ ನೀಡುತ್ತದೆ. ಅಲೆಮಾರಿ ಸಮಾಜಕ್ಕೂ ಪ್ರತ್ಯೇಕ ಮೀಸಲಾತಿ ನೀಡುವ ಬಗ್ಗೆಯೂ ಚಿಂತನೆ ನಡೆದಿದೆ. ಸರಕಾರ ಯಾವ ಸಮುದಾಯಕ್ಕೂ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳುತ್ತದೆ ಎಂದು ಮುನಿಯಪ್ಪ ತಿಳಿಸಿದರು.
ಸಭೆಯಲ್ಲಿ ಹಳಿಯಾಳದ ಗುರುನಾಥ ದಾನಪ್ಪ ಸೇರಿದಂತೆ ಸಮಾಜದ ಮುಖಂಡರು ತಮ್ಮ ಹೋರಾಟದ ಹಿನ್ನೆಲೆಯನ್ನು ವಿವರಿಸಿದರು. 20 ವರ್ಷಗಳಿಂದ ನಡೆಯುತ್ತಿರುವ ಹೋರಾಟಕ್ಕೆ ಇಂದಿನ ಸಭೆಯು ಹೊಸ ಆಶಾಕಿರಣವಾಗಿದೆ ಎಂದು ಅವರು ತಿಳಿಸಿದರು.
ಸಮಾಜದ ಬೇಡಿಕೆಗಳನ್ನು ಆಲಿಸಿದ ಮುನಿಯಪ್ಪ, ಮುಂಬರುವ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯವನ್ನು ಚರ್ಚೆ ಮಾಡಿ ಅಂತಿಮ ತೀರ್ಮಾನಕ್ಕೆ ಬರುತ್ತೇವೆ ಎಂದು ಭರವಸೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರರಿಗೆ ಸಂಬಂಧಿಸಿದ ಸುತ್ತೋಲೆ, ಆದೇಶಗಳನ್ನು ಸರಕಾರ ಹೊರಡಿಸಬೇಕಾಗಿದೆ. ನಾಗಮೋಹನ್ ದಾಸ್ ಆಯೋಗದ ವರದಿ ಹಾಗೂ ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಜಾರಿಗೆ ತರಬೇಕಾದ ಅಗತ್ಯವಿದೆ. ಮೊಗೇರ ಸಮುದಾಯದ ಜನಸಂಖ್ಯೆಯ ಕುರಿತಂತೆ ಗೊಂದಲವಿದ್ದು, ನಿಜವಾದ ಮೊಗೇರರು ತುಂಬಾ ಕಡಿಮೆ ಇದ್ದರೂ 80–87 ಸಾವಿರ ಜನರು ಈ ಹೆಸರಿನಲ್ಲಿ ಲಾಭ ಪಡೆಯುತ್ತಿರುವ ಬಗ್ಗೆ ಸಚಿವರು ಆತಂಕ ವ್ಯಕ್ತಪಡಿಸಿದರು.
‘ಮೂಲ ಮಾದಿಗರು’ ಎಂದು ಬರೆದಿದ್ದಲ್ಲಿ ಯಾವುದೇ ಸಮಸ್ಯೆ ಇಲ್ಲ, ಆದರೆ ಮೇತ್ರಿ-ಮಾದಿಗರ ವಿಷಯದಲ್ಲಿ ಭಾವನಾತ್ಮಕ ಹಾಗೂ ಸಾಮಾಜಿಕ ತಳಹದಿ ಇರುವುದರಿಂದ ಅದನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ಸಮುದಾಯದ ಬೇಡಿಕೆ ಪ್ರಕಾರ, ಮಾದಿಗರ ಮೂಲ ಹೆಸರನ್ನು ಪುನಃ ದೃಢಪಡಿಸುವಂತೆ ಹಾಗೂ ತಪ್ಪಾದ ದಾಖಲೆಗಳನ್ನು ತಿದ್ದುಪಡಿ ಮಾಡುವಂತೆ ಸರಕಾರ ಕ್ರಮ ಕೈಗೊಳ್ಳಲಿದೆ ಎಂದು ಮುನಿಯಪ್ಪ ಹೇಳಿದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕ ನಾಗೇಶ್, ಸಚಿವರ ಆಪ್ತ ಕಾರ್ಯದರ್ಶಿ ಡಾ.ಎಚ್. ನಟರಾಜ್, ಕಾಂಗ್ರೆಸ್ ಮುಖಂಡ ಗುರುನಾಥ ದಾನಪ್ಪ, ಶಿವಪ್ಪ, ಪುರುಷೋತ್ತಮ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







