ಗುರು ರಾಘವೇಂದ್ರ ಬ್ಯಾಂಕ್ ನಿರ್ದೇಶಕ ಮಂಡಳಿ ಚುನಾವಣೆಗೆ ನಿರ್ದೇಶನ ಕೋರಿ ಅರ್ಜಿ; ಸರ್ಕಾರ, ಆರ್‌ಬಿಐಗೆ ಹೈಕೋರ್ಟ್ ನೋಟಿಸ್

ಬೆಂಗಳೂರು : ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ನ ನಿರ್ದೇಶಕ ಮಂಡಳಿಯ ಆಯ್ಕೆಗೆ ಚುನಾವಣೆ ನಡೆಸಲು ನಿರ್ದೇಶಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿ ಸಂಬಂಧ ರಾಜ್ಯ ಸರ್ಕಾರ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್‌ಗೆ (ಆರ್‌ಬಿಐ) ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ನ ಠೇವಣಿದಾರರ ಸಂಘದ ಕಾರ್ಯದರ್ಶಿ ಜಿ.ಕೆ. ಗುರುರಾಜ ರಾವ್ ಹಾಗೂ ಪಿ. ಮಂಜುಳಾ ರಾವ್, ಕೆ. ಯೋಗಾನಂದ ಕುಮಾರ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಆರ್. ನಟರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ಅರ್ಜಿ ಕುರಿತು ಕೆಲ ಕಾಲ ವಾದ ಆಲಿಸಿದ ನ್ಯಾಯಪೀಠ, ಪ್ರತಿವಾದಿಗಳಾದ ರಾಜ್ಯ ಸರ್ಕಾರ, ಆರ್‌ಬಿಐ ಹಾಗೂ ಶ್ರೀ ಗುರು ರಾಘವೇಂದ್ರ ಬ್ಯಾಂಕ್‌ಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಸೆಪ್ಟೆಂಬರ್ 16ಕ್ಕೆ ಮುಂದೂಡಿತು.
ಮನವಿ ಏನು?
ಬ್ಯಾಂಕ್‌ನ ನಿರ್ದೇಶಕ ಮಂಡಳಿಗೆ ಚುನಾವಣೆ ನಡೆಸುವಂತೆ 2023ರ ಅಕ್ಟೋಬರ್ 9ರಂದು ಅರ್ಜಿದಾರರ ಸಂಘ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿ 2025ರ ಏಪ್ರಿಲ್ 28ರಂದು ಸಹಕಾರ ಸಂಘಗಳ ನಿಬಂಧಕರು ಹೊರಡಿಸಿದ ಆದೇಶ ರದ್ದುಪಡಿಸಬೇಕು. ಬ್ಯಾಂಕ್‌ನ ನಿರ್ದೇಶಕ ಮಂಡಳಿಗೆ ಚುನಾವಣೆ ನಡೆಸಲು ಸಹಕಾರ ಸಂಘಗಳ ನಿಬಂಧಕರಿಗೆ ಅನುವು ಮಾಡಿಕೊಡಲು ಆರ್‌ಬಿಐಗೆ ನಿರ್ದೇಶಿಸಬೇಕು. ಅದೇ ರೀತಿ ಅರ್ಜಿದಾರ ಸಂಘ ಹಾಗೂ ಷೇರುದಾರರು ಸೇರಿ ತಾತ್ಕಾಲಿಕ ನಿರ್ವಹಣಾ ಸಮಿತಿ ರಚಿಸಿಕೊಳ್ಳಲು ಅನುಮತಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.







