ಬಾನು ಮುಷ್ತಾಕ್‍ರಿಂದ ‘ದಸರಾ ಉದ್ಘಾಟನೆ’ಗೆ ರಾಜಕೀಯ ಪ್ರೇರಿತ ವಿರೋಧ : ಸಿದ್ದರಾಮಯ್ಯ

ಬೆಂಗಳೂರು, ಸೆ. 6: ‘ನಾಡಹಬ್ಬ ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್‌ರ ಆಯ್ಕೆ ವಿರೋಧಿಸಿ ಮಾಜಿ ಸಂಸದ ಪ್ರತಾಪ್ ಸಿಂಹ ಕೋರ್ಟ್ ಮೆಟ್ಟಿಲೇಲಿರಿದ್ದು, ಈ ವಿಷಯವನ್ನು ಹೈಕೋರ್ಟ್ ತೀರ್ಮಾನಿಸಲಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಶನಿವಾರ ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಹಿಂದೆ ಸಾಹಿತಿ ಕೆ.ಎಸ್. ನಿಸ್ಸಾರ್ ಅಹ್ಮದ್ ಅವರು ದಸರಾ ಉದ್ಘಾಟಿಸುವುದನ್ನು ಯಾರು ವಿರೋಧಿಸಿರಲಿಲ್ಲ. ಟಿಪ್ಪು ಸುಲ್ತಾನ್, ಮಿರ್ಜಾ ಇಸ್ಮಾಯಿಲ್ ಮೆರವಣಿಗೆಗಳನ್ನು ಏಕೆ ವಿರೋಧಿಸಲಿಲ್ಲ. ವಿಪಕ್ಷದವರು ರಾಜಕೀಯ ದುರುದ್ದೇಶದಿಂದ ನಾಡಹಬ್ಬ ಉದ್ಘಾಟಿಸುವುದನ್ನು ವಿರೋಧಿಸುತ್ತಿದ್ದು, ಸರಕಾರ ರಾಜಕೀಯವಾಗಿಯೇ ಪ್ರತ್ಯುತ್ತರ ನೀಡಲಿದೆ ಎಂದು ತಿರುಗೇಟು ನೀಡಿದರು.
ಬಾನು ಮುಷ್ತಾಕ್ ಅವರು ಕನ್ನಡಾಂಬೆಯ ಬಗ್ಗೆ ಹೀಗಳೆದು ಮಾತನಾಡಿರುವ ಬಗ್ಗೆ ಯಾವ ಪುರಾವೆಯಿಲ್ಲ. ಅವರು ಕನ್ನಡದಲ್ಲಿ ಬರೆದ ಕೃತಿಯ ಅನುವಾದಕ್ಕೆ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ಬಂದಿದೆ. ಆದುದರಿಂದ ರಾಜ್ಯ ಸರಕಾರ ಲೇಖಕಿ ಬಾನು ಮುಷ್ತಾಕ್ ಹಾಗೂ ಅವರ ಕೃತಿಯನ್ನು ಅನುವಾದಿಸಿದ ದೀಪಾ ಬಸ್ತಿ ಅವರನ್ನು ಸನ್ಮಾನಿಸಿದೆ. ಬಾನು ಮುಷ್ತಾಕ್ ಅವರು ಕನ್ನಡದ ಹಿರಿಯ ಸಾಹಿತಿಯೂ ಆಗಿರುವ ಕಾರಣ ಅವರಿಂದ ದಸರಾ ಉತ್ಸವವನ್ನು ಉದ್ಘಾಟಿಸಲು ಆಹ್ವಾನಿಸಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಚುನಾವಣೆಗೆ ಶಿಫಾರಸ್ಸು: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಶಿಫಾರಸ್ಸು ಮಾಡಲಾಗುವುದು. ಪ್ರಪಂಚದ ವಿವಿಧ ದೇಶಗಳಲ್ಲಿ ಇವಿಎಂ ವ್ಯವಸ್ಥೆಯನ್ನು ತೊರೆದು, ಪುನಃ ಮತಪತ್ರಗಳಿಗೆ ಮೊರೆ ಹೋಗಿವೆ ಎಂದು ಅವರು ತಿಳಿಸಿದರು.







