ಧರ್ಮಗಳ ನಡುವಿನ ಕಲಹ ನಿಲ್ಲಿಸುವಲ್ಲಿ ಸುಪ್ರೀಂ ಕೋರ್ಟ್ ವಿಫಲ : ನ್ಯಾ.ವಿ.ಗೋಪಾಲಗೌಡ

ಬೆಂಗಳೂರು : ದೇಶದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಧರ್ಮ, ಧರ್ಮಗಳ ನಡುವಿನ ಕಲಹಗಳನ್ನು ನಿಲ್ಲಿಸುವಲ್ಲಿ ಸರಕಾರಗಳು ಮಾತ್ರವಲ್ಲದೇ, ಸುಪ್ರೀಂ ಕೋರ್ಟ್ ಕೂಡ ವಿಫಲಗೊಂಡಿದೆ ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಬೇಸರ ವ್ಯಕ್ತಪಡಿಸಿದ್ದಾರೆ.
ಶನಿವಾರ ನಗರದ ಬಸವ ಸಮಿತಿಯ ಸಭಾಂಗಣದಲ್ಲಿ ಪ್ರವಾದಿ ಮುಹಮ್ಮದ್(ಸ)ರವರ ಬದುಕು ಮತ್ತು ಬೋಧನೆಗಳನ್ನು ನಾಡಿನ ಜನತೆಗೆ ಪರಿಚಯಿಸುವ ನಿಟ್ಟಿನಲ್ಲಿ ‘ಜಮಾಅತೆ ಇಸ್ಲಾಮೀ ಹಿಂದ್-ಕರ್ನಾಟಕ’ ವತಿಯಿಂದ ರಾಜ್ಯಾದ್ಯಂತ ಸೀರತ್ (ಪ್ರವಾದಿ ಜೀವನ ಸಂದೇಶ) ಅಭಿಯಾನ ನಡೆಸಲಾಗುತ್ತಿದ್ದು, ಇದರ ಭಾಗವಾಗಿ ಏರ್ಪಡಿಸಿದ್ದ ‘ನ್ಯಾಯದ ಹರಿಕಾರ ಪೈಗಂಬರ್ ಮುಹಮ್ಮದ್(ಸ)’ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.
ಜನಪರವಾಗಿ ಕಾನೂನು, ಯೋಜನೆ ರೂಪಿಸಬೇಕಾದ ಶಾಸಕಾಂಗ ಅಸಾಂವಿಧಾನಿಕ ಕೆಲಸಗಳನ್ನೇ ಮಾಡುತ್ತಿದೆ. ಸಂವಿಧಾನ ಬದ್ಧವಾದ ಆಡಳಿತವನ್ನು ಸಮಸ್ತ ನಾಗರಿಕರಿಗೆ ತಲುಪಿಸುವಲ್ಲಿ ರಾಜಕೀಯ ಪಕ್ಷಗಳ ಪಾತ್ರ ಬಹಳ ದೊಡ್ಡದು. ಆದರೆ, ರಾಜಕಾರಣಿಗಳು ಅಧಿಕಾರಕ್ಕಾಗಿ ಮಾತ್ರ ಕೆಲಸ ಮಾಡುತ್ತಿದ್ದಾರೆ. ಇನ್ನೊಂದೆಡೆ ಭುಗಿಲೆದ್ದಿರುವ ಧರ್ಮ, ಧರ್ಮಗಳ ನಡುವಿನ ಕಲಹಗಳನ್ನು ನಿಲ್ಲಿಸುವಲ್ಲಿ ಸರಕಾರಗಳು ಮಾತ್ರವಲ್ಲದೆ, ನ್ಯಾಯಾಂಗವೂ ವಿಫಲವಾಗಿದೆ ಎಂದು ಅವರು ತಿಳಿಸಿದರು.
ದೇಶದ ಎಲ್ಲ ಧರ್ಮಗಳು ಒಂದೇ ಸಮಾನ ಹಕ್ಕು ಹೊಂದಿವೆ ಎಂದು ಸುಪ್ರೀಂ ಕೋರ್ಟ್ ಅನೇಕ ಬಾರಿ ಸ್ಪಷ್ಟಪಡಿಸಿದೆ. ಆದರೆ, ಒಂದು ನಿರ್ದಿಷ್ಟ ಪಕ್ಷವೊಂದು ತಾವೂ ಬಹುಸಂಖ್ಯಾತರು, ಇವರು ಅಲ್ಪಸಂಖ್ಯಾತರು ಎಂದು ಹೇಳುತ್ತಾ ಮತಗಳಲ್ಲಿ ಭೇದಭಾವ ಹುಟ್ಟುಹಾಕಿ, ಸಮಾಜದಲ್ಲಿನ ಏಕತೆಗೆ ಧಕ್ಕೆ ತರುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಅವರು ಹೇಳಿದರು.
ಶಾಸಕಾಂಗ, ಕಾರ್ಯಾಂಗ ಕೈಕೊಟ್ಟಾಗ ಕಾನೂನುಗಳನ್ನು, ಜನರ ಮೂಲಭೂತ ಹಕ್ಕುಗಳನ್ನು ರಕ್ಷಣೆ ಮಾಡಬೇಕಾದ ಸ್ವತಂತ್ರ ಅಂಗವಾದ ನ್ಯಾಯಾಂಗವು ವಿಫಲವಾಗಿದೆ. ಇವೆಲ್ಲದರ ಬಗ್ಗೆ ಟೀಕೆ, ಟಿಪ್ಪಣಿ ಮಾಡಿ ವ್ಯವಸ್ಥೆ ಸರಿಪಡಿಸಬೇಕಾದ ಮಾಧ್ಯಮಗಳು ಜನರ ದಾರಿತಪ್ಪಿಸುವ ಕೆಲಸದಲ್ಲಿ ನಿರತವಾಗಿವೆ ಎಂದರು.







