ಪ್ರಧಾನಿ ಮೋದಿ ಹುಟ್ಟುಹಬ್ಬ ಹಿನ್ನೆಲೆ: ಪೊರಕೆ ಹಿಡಿದು ಕಸ ಗುಡಿಸಿದ ಯಡಿಯೂರಪ್ಪ, ಸದಾನಂದ ಗೌಡ

ಬೆಂಗಳೂರು, ಸೆ.17: ಪ್ರಧಾನ ಮಂತ್ರಿ ನರೇಂದ್ರ ಮೋದಿ ಹುಟ್ಟುಹಬ್ಬದ ಅಂಗವಾಗಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದಗೌಡ ಪೊರಕೆ ಹಿಡಿದು ಕಸ ಗುಡಿಸಿ, ಸ್ವಚ್ಚತಾ ಕಾರ್ಯ ಕೈಗೊಂಡರು.
ಬುಧವಾರ ಡಾಲರ್ಸ್ ಕಾಲನಿಯ ಧವಳಗಿರಿ ನಿವಾಸದ ಬಳಿ ಸೇವಾ ಪಾಕ್ಷಿಕ ಅಭಿಯಾನದಡಿ ಪೌರ ಕಾರ್ಮಿಕರ ಜತೆ ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದಗೌಡ ಸೇರಿದಂತೆ ಹಲವು ಬಿಜೆಪಿ ಮುಖಂಡರು ಪೊರಕೆ ಹಿಡಿದು ರಸ್ತೆಯಲ್ಲಿದ್ದ ಒಣ ತ್ಯಾಜ್ಯವನ್ನು ವಿಲೇವಾರಿ ಮಾಡಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹುಟ್ಟುಹಬ್ಬಕ್ಕೆ ಶುಭ ಕೋರಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ನರೇಂದ್ರ ಮೋದಿಯವರ ವ್ಯಕ್ತಿತ್ವ, ನಾಯಕತ್ವ, ದೂರದೃಷ್ಟಿ ಕೇವಲ ಭಾರತೀಯರಿಗೆ ಮಾತ್ರವಲ್ಲ, ಇಡೀ ವಿಶ್ವಕ್ಕೆ ಆದರ್ಶ ಮತ್ತು ಪ್ರೇರಣೆ ನೀಡುವಂತಿದೆ ಎಂದು ಬಣ್ಣಿಸಿದರು.
ಸದಾನಂದಗೌಡ ಮಾತನಾಡಿ, ಭಾರತವು ಮೋದಿಯವರ ನೇತೃತ್ವದಲ್ಲಿ ಕೇವಲ 12 ವರ್ಷಗಳಲ್ಲಿ ಜಗತ್ತಿನ ಅಗ್ರಮಾನ್ಯ ರಾಷ್ಟ್ರವಾಗಿ ಪರಿವರ್ತನೆ ಹೊಂದಿದೆ. ಇವತ್ತು ಜಗತ್ತಿನಲ್ಲಿ ಪ್ರತಿಯೊಂದು ವಿಚಾರಕ್ಕೂ ಭಾರತವನ್ನು ನೋಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.







