ಕ್ರೈಸ್ತರಿಗೆ ಮತ್ತೊಂದು ಸಮುದಾಯದ ಹಕ್ಕು ಕಸಿಯುವ ಆಸಕ್ತಿಯಿಲ್ಲ: ಐವಾನ್ ಡಿ’ಸೋಜ

ಬೆಂಗಳೂರು, ಸೆ.17: ಕ್ರೈಸ್ತರಿಂದ ಮತ್ತೊಂದು ಸಮುದಾಯದ ಹಕ್ಕು, ಮೀಸಲಾತಿ ಕಸಿಯುವ ಆಸಕ್ತಿಯಿಲ್ಲ. ಅನಗತ್ಯವಾಗಿ ಬಿಜೆಪಿಯವರು ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ (ಜಾತಿಗಣತಿ)ಯನ್ನು ರಾಜಕೀಯಕರಣಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಐವಾನ್ ಡಿ’ಸೋಜ ತಿಳಿಸಿದರು.
ಬುಧವಾರ ವಿಧಾನಸೌಧದಲ್ಲಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಕ್ರೈಸ್ತರಲ್ಲಿ 45 ಜಾತಿಗಳನ್ನು ಪಟ್ಟಿ ಮಾಡಿದೆ. ಇದು ಮತಾಂತರಕ್ಕೆ ಪ್ರಚೋದನೆ ಕುಮ್ಮಕ್ಕು ನೀಡಲಿದೆ ಎಂದು ಬಿಜೆಪಿಯವರು ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಹೇಳಿದರು.
ಕ್ರೈಸ್ತರು ಧರ್ಮದ ಕಾಲಂನಲ್ಲಿ ‘ಕ್ರೈಸ್ತ’ ಎಂದು ಬರೆಸಬೇಕು. ರಾಜ್ಯದಲ್ಲಿ ಕ್ರೈಸ್ತರು ಪ್ರವರ್ಗ ‘3ಬಿ’ಯಲ್ಲಿ ಬರುತ್ತಾರೆ. ನಮ್ಮಲ್ಲಿ ಯಾವುದೆ ರೀತಿಯ ಗೊಂದಲ ಇಲ್ಲ. ಹೊಸ ಜಾತಿಗಳ ಬಗ್ಗೆ ನನಗೆ ಗೊತ್ತಿಲ್ಲ. ಇದಕ್ಕೆ ಸಂಬಂಧಿಸಿದಂತೆ ಹಿಂದುಳಿದ ವರ್ಗಗಳ ಆಯೋಗವೆ ಉತ್ತರ ಕೊಡಬೇಕು. ಅನ್ಯ ಸಮುದಾಯಗಳಿಂದ ಮತಾಂತರಗೊಂಡವರು ಜಾತಿ ಕಾಲಂ ನಲ್ಲಿ ಏನು ಬರೆಸಬೇಕು ಎಂಬುದು ಅವರಿಗೆ ಬಿಟ್ಟ ವಿಚಾರ ಎಂದು ಅವರು ಹೇಳಿದರು.
ಸೆ.22ರಿಂದ ಜಾತಿ ಗಣತಿ ಸಮೀಕ್ಷೆ ಆರಂಭಗೊಳ್ಳಲಿದೆ. ಹಿಂದುಳಿದ ವರ್ಗಗಳ ಆಯೋಗದವರು ಸಮೀಕ್ಷೆಗೆ 60 ಪ್ರಶ್ನಾವಳಿಗಳನ್ನು ಸಿದ್ಧಪಡಿಸಿಕೊಂಡಿದ್ದಾರೆ. ಎಲ್ಲ ಸಮುದಾಯದವರೂ ಸಮೀಕ್ಷೆಗೆ ಸಹಕಾರ ಕೊಡಬೇಕು ಎಂದು ಐವಾನ್ ಡಿ’ಸೋಜ ಮನವಿ ಮಾಡಿದರು.
ಈಗಾಗಲೆ ಎಲ್ಲ ಮನೆಗಳಿಗೆ ಅಧಿಕಾರಿಗಳು ಭೇಟಿ ನೀಡಿ ಸಮೀಕ್ಷೆಗೆ ಸಂಬಂಧಪಟ್ಟ ಸ್ಟಿಕ್ಕರ್ ಅಂಟಿಸಿ, ಮನೆಯವರಿಗೆ ಮಾಹಿತಿಗಳನ್ನು ಕೊಟ್ಟಿದ್ದಾರೆ. ಜನರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಪರಿಸ್ಥಿತಿ ಅಧ್ಯಯನ ಮಾಡಿ ಸರಕಾರ ತನ್ನ ನೀತಿ ನಿರೂಪಣೆ, ಕಾರ್ಯಕ್ರಮಗಳಲ್ಲಿ ಅದನ್ನು ಅಳವಡಿಸಿಕೊಳ್ಳಲಿದೆ. ಎಲ್ಲ ವರ್ಗಗಳಿಗೂ ಈ ಸಮೀಕ್ಷೆ ಮೂಲಕ ನ್ಯಾಯ ಸಿಗುವ ನಿರೀಕ್ಷೆಯಿದೆ ಎಂದು ಐವಾನ್ ಡಿ’ಸೋಜ ಹೇಳಿದರು.
ಶಿವಾಜಿನಗರದ ಮೆಟ್ರೋ ನಿಲ್ದಾಣಕ್ಕೆ ‘ಸಂತ ಮೇರಿ’ ಹೆಸರು ನಾಮಕರಣ ಮಾಡುವ ಪ್ರಸ್ತಾವಕ್ಕೆ ವಿರೋಧ ವ್ಯಕ್ತವಾಗುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇದರ ಬಗ್ಗೆ ನನಗೆ ಗೊತ್ತಿಲ್ಲ, ಮಾಹಿತಿ ಪಡೆದು ಮಾತನಾಡುತ್ತೇನೆ ಎಂದು ಹೇಳಿದರು.
ಮತಾಂತರ ನಿಷೇಧ ಕಾಯ್ದೆ ವಾಪಸ್ ಪಡೆಯುವಂತೆ ಕ್ರೈಸ್ತ ಧರ್ಮದ ನಿಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಐವಾನ್ ಡಿ’ಸೋಜ, ಕ್ರೈಸ್ತ ಧರ್ಮದವರ ನಿಯೋಗವು ಮುಖ್ಯಮಂತ್ರಿಯನ್ನು ಭೇಟಿ ಮಾಡಿದ ವಿಚಾರ ನನಗೆ ಗೊತ್ತಿಲ್ಲ. ಆದರೆ, ಬಿಜೆಪಿ ಸರಕಾರದ ಅವಧಿಯಲ್ಲಿ ಜಾರಿಗೆ ತಂದ ಮತಾಂತರ ನಿಷೇಧ ಕಾಯ್ದೆ ಹಿಂಪಡೆಯುವ ಬಗ್ಗೆ ನಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿದೆ. ಈ ಕುರಿತು ಸೂಕ್ತ ಸಂದರ್ಭದಲ್ಲಿ ಮುಖ್ಯಮಂತ್ರಿ ನಿರ್ಧಾರ ಮಾಡುತ್ತಾರೆ ಎಂದು ಹೇಳಿದರು.







