ರಾಹುಲ್ ಗಾಂಧಿ ಸಾಮಾನ್ಯ ಜ್ಞಾನ ಇಲ್ಲದ ವ್ಯಕ್ತಿ: ಆರ್.ಅಶೋಕ್

ಬೆಂಗಳೂರು, ಸೆ. 18: ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಸಾಮಾನ್ಯ ಜ್ಞಾನ ಇಲ್ಲದ ವ್ಯಕ್ತಿ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ.
ಗುರುವಾರ ಯಲಹಂಕದ ಸಿಂಗನಾಯಕನಹಳ್ಳಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, 2023ರಲ್ಲಿ ಆಳಂದ ಕ್ಷೇತ್ರದ ಚುನಾವಣೆಯಲ್ಲಿ 6ಸಾವಿರಕ್ಕೂ ಹೆಚ್ಚು ಮತದಾರರ ಹೆಸರನ್ನು ತೆಗೆದುಹಾಕುವ ಪ್ರಯತ್ನ ನಡೆದಿತ್ತು ಎಂಬ ರಾಹುಲ್ ಗಾಂಧಿ ಆರೋಪದಲ್ಲಿ ಹುರುಳಿಲ್ಲ. ರಾಹುಲ್, ಯಾರೋ ಬರೆದುಕೊಟ್ಟಿದ್ದನ್ನು ಪದೇ ಪದೇ ಹೇಳಿ ನಾಲ್ಕೈದು ವರ್ಷಗಳಿಂದ ದೇಶದಲ್ಲಿ ಅತಿಹೆಚ್ಚು ಅಪಹಾಸ್ಯಕ್ಕೆ ಒಳಗಾದ ವ್ಯಕ್ತಿ ಎಂದು ಟೀಕಿಸಿದರು.
ಮಹದೇವಪುರದ ಕುರಿತು ಆರೋಪ ಬೋಗಸ್ ಎಂದು ಗೊತ್ತಾಗಿತ್ತು. ಒಂದೇ ಮನೆಯಲ್ಲಿ ನೂರಾರು ಮತ ಎಂದಿದ್ದರು. ಅಲ್ಲಿದ್ದುದು 4 ಮತ, ಅಷ್ಟೇ ಮತ ಚಲಾವಣೆ ಆದು ಸಾಬೀತಾಗಿತ್ತು. ಈಗ ಮತ್ತೆ ಆಳಂದ ಕ್ಷೇತ್ರವನ್ನು ಹಿಡಿದುಕೊಂಡಿದ್ದಾರೆ ಎಂದು ಅವರು ಲೇವಡಿ ಮಾಡಿದರು.
ಆಳಂದ ಬಹಳ ದೂರ ಇದೆ. ಬೆಂಗಳೂರು ಪಕ್ಕದ ಮಾಲೂರಿನಲ್ಲಿ ಮತಗಳ್ಳತನ ಎಂದು ಹೈಕೋರ್ಟ್ ಆದೇಶ ಮಾಡಿದೆ. ಅಲ್ಲಿನ ಜಿಲ್ಲಾಧಿಕಾರಿ, ಕೋರ್ಟ್ ಆದೇಶವಿದ್ದರೂ ಸಿಸಿಟಿವಿ ಮಾಹಿತಿಯನ್ನು ಕೇಳಿದ್ದರೂ ಕೊಟ್ಟಿಲ್ಲ. ಅಲ್ಲಿ ಗೆದ್ದ ಕಾಂಗ್ರೆಸ್ ಶಾಸಕರ ಸದಸ್ಯತ್ವ ವಜಾ ಆಗಿದೆ. ಇದಕ್ಕಿಂತ ಸಾಕ್ಷಿ ಬೇಕೇ? ಎಂದು ಅಶೋಕ್ ಕೇಳಿದರು.
ಅಫಿಡವಿಟ್ ಕೊಡಿ ಎಂದು ರಾಹುಲ್ ಗಾಂಧಿಯವರಿಗೆ ಚುನಾವಣಾ ಆಯೋಗ ಕೇಳಿದ್ದರೂ ಕೊಟ್ಟಿಲ್ಲ, ಮಾಲೂರಿನಲ್ಲಿ ನಮ್ಮ ಅಭ್ಯರ್ಥಿ ಅಫಿಡವಿಟ್ ಕೊಟ್ಟು, ತನಿಖೆಗೆ ಹೈಕೋರ್ಟಿಗೆ ವಿನಂತಿಸಿದ್ದರು. ಹೈಕೋರ್ಟ್, ಡಿಸಿ ತಪ್ಪು ಮಾಡಿದ್ದಾಗಿ ತಿಳಿಸಿ ಕ್ರಮ ಕೈಗೊಳ್ಳಲು ಆದೇಶ ಮಾಡಿದೆ. ರಾಹುಲ್ ಗಾಂಧಿಗೆ ಇದರ ಜ್ಞಾನ ಇಲ್ಲವೇ ಎಂದು ಅಶೋಕ್ ಪ್ರಶ್ನಿಸಿದರು.







