ಬಿಜೆಪಿಯವರೇ ಮತಗಳ್ಳತನ ಮಾಡುತ್ತಿದ್ದಾರೆ, ನನ್ನ ಬಳಿ ಅಧಿಕೃತ ದಾಖಲೆಗಳಿವೆ : ಪ್ರಿಯಾಂಕ್ ಖರ್ಗೆ

ಬೆಂಗಳೂರು, ಸೆ.18 : ಕಲಬುರಗಿ ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಮತಗಳವು ಮಾಡಲಾಗಿದೆ ಎಂದು ಲೋಕಸಭೆಯ ವಿರೋಧ ಪಕ್ಷ ನಾಯಕ ರಾಹುಲ್ ಗಾಂಧಿ ಆರೋಪಕ್ಕೆ ರಾಜ್ಯ ಸರಕಾರದ ಅನೇಕ ಸಚಿವರು ಧ್ವನಿಗೂಡಿಸಿದ್ದು, ಚುನಾವಣಾ ಆಯೋಗ ಹಾಗೂ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಗುರುವಾರ ಈ ಕುರಿತು ಪ್ರತಿಕ್ರಿಯಿಸಿದ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ‘ಬಿಜೆಪಿಯವರೇ ಮತಗಳ್ಳತನ ಮಾಡುತ್ತಿದ್ದಾರೆ. ನನ್ನ ಬಳಿ ಅಧಿಕೃತ ದಾಖಲೆಗಳಿವೆ. ಸ್ವಲ್ಪ ಸಮಯ ಬಂದಾಗ ಅದನ್ನು ನಿಮ್ಮ ಮುಂದಿಡುತ್ತೇವೆ. ಇದೇನಾದರೂ ಹೊರಗಡೆ ಬಂದರೆ ಸರಕಾರಗಳೇ ಬಿದ್ದು ಹೋಗುತ್ತವೆ’ ಎಂದು ಹೇಳಿದರು.
‘ಆಳಂದ ಮತ ಕ್ಷೇತ್ರದಲ್ಲಿ ಮತಗಳವು ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, 2023ರ ಚುನಾವಣೆಗೂ ಮುನ್ನ 7,250 ಮತದಾರರ ಹೆಸರು ಏಕಾಏಕಿ ಮತದಾರರಿಗೆ ಗೊತ್ತಿಲ್ಲದೆ ತೆಗೆದು ಹಾಕಲಾಗಿತ್ತು. ಅದರ ಬಗ್ಗೆ ಶಾಸಕ ಬಿ.ಆರ್.ಪಾಟೀಲ್ ಮತ್ತು ನಾನು ಚುನಾವಣಾ ಆಯೋಗಕ್ಕೆ ದೂರು ಕೊಟ್ಟಿದ್ದೆವು. ಅದರ ಆಧಾರದ ಮೇಲೆ ಕಲಬುರಗಿಯಲ್ಲಿ ಎಫ್‍ಐಆರ್ ದಾಖಲಿಸಲಾಯಿತು. ಪರಿಶೀಲನೆ ಮಾಡಿದಾಗ ಮೊಬೈಲ್ ನಂಬರ್‍ಗಳು ಮಧ್ಯ ಪ್ರದೇಶ, ಬಿಹಾರ, ಗುಜರಾತ್‍ನಲ್ಲಿ ಪತ್ತೆಯಾಗಿತ್ತು. ಸಿಐಡಿ ತನಿಖಾಧಿಕಾರಿಗಳು ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಪತ್ರ ಬರೆದಿದ್ದರು. ಮೊಬೈಲ್ ನಂಬರ್ ಐಪಿ ವಿಳಾಸ ಎಲ್ಲೆಲ್ಲಿದೆ ಎನ್ನುವ ಮಾಹಿತಿ ಕೇಳಿದ್ದರು. ಆದರೆ, ಚುನಾವಣಾ ಆಯೋಗ ಯಾವುದೇ ಮಾಹಿತಿ ನೀಡಿಲ್ಲ’ ಎಂದು ಅವರು ಆರೋಪಿಸಿದರು.







