ದಾದಾಗಿರಿಯ ದಿನಗಳು ಮುಗಿದವು. ಮೊದಲು ರಸ್ತೆ ಗುಂಡಿ ಮುಚ್ಚಿ ಮಾನ ಕಾಪಾಡಿಕೊಳ್ಳಿ: ಡಿಕೆಶಿಗೆ ಜೆಡಿಎಸ್ ತರಾಟೆ

ಬೆಂಗಳೂರು: ಉದ್ಯಮಿಗಳಿಗೆ ಧಮ್ಕಿ ಹಾಕಿ, ದಾದಾಗಿರಿ ಮಾಡುವುದಕ್ಕೆ ನಿಮ್ಮನ್ನು ಡಿಸಿಎಂ ಮಾಡಿಲ್ಲ. ಕೆಲಸ ಮಾಡಿ ಎಂದು ಜನ ಕೂರಿಸಿದ್ದಾರೆ. ಹಳೆಯ ಚಾಳಿ ಬಿಡಿ. ದಾದಾಗಿರಿಯ ದಿನಗಳು ಮುಗಿದವು. ಮೊದಲು ರಸ್ತೆ ಗುಂಡಿ ಮುಚ್ಚಿ ಮಾನ ಕಾಪಾಡಿಕೊಳ್ಳಿ. ಕೈಯಲ್ಲಿ ಆಗಲಿಲ್ಲ ಎಂದರೆ, ಬೆಂಗಳೂರು ಉಸ್ತುವಾರಿ ಬಿಡಿ ಎಂದು ರಾಜ್ಯ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರನ್ನು ಜೆಡಿಎಸ್ ತರಾಟೆಗೈದಿದೆ.
ಈ ಬಗ್ಗೆ ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿರುವ ರಾಜ್ಯ ಜೆಡಿಎಸ್, "ಡಿಸಿಎಂ ಡಿಕೆ ಶಿವಕುಮಾರ್ ಅವರೇ, ನಿಮ್ಮಲ್ಲೇನೋ ಮೂಲಭೂತ ಸಮಸ್ಯೆ ಇದೆ. ಬರೀ ಧಿಮಾಕು, ಎಲ್ಲವನ್ನೂ ಬಲ್ಲೆ ಎನ್ನುವ ಪೋಷಾಕು! ಅದಕ್ಕೆ ಏನೋ ಬೆಂಗಳೂರಿನ ಮೂಲಭೂತ ಸೌಕರ್ಯ ಎಕ್ಕುಟ್ಟಿ ಹೋಗಿದೆ. ಬಹುಶಃ, ನಿಮಗೆ ನೆಟ್ ವರ್ಕಿಂಗ್ ಸಮಸ್ಯೆ ಕಾಡುತ್ತಿರಬಹುದು. ನಿಮ್ಮ ಮಿದುಳು, ನಾಲಿಗೆಯ ನಡುವೆ ಲೈನಪ್ ಸರಿ ಇದ್ದಂತೆ ಇಲ್ಲ! ಏಕೆಂದರೆ, ಇನ್ನೊಬ್ಬರ ಹೇಳಿಕೆಯನ್ನು ಅರ್ಥೈಸಿಕೊಳ್ಳುವ ಬೌದ್ಧಿಕ ಸಾಮರ್ಥ್ಯ ನಿಮಗಿಲ್ಲ. ಅಸಂಬದ್ಧವಾಗಿ ಪ್ರತಿಕ್ರಿಯೆ ಕೊಡುತ್ತೀರಿ. ನಗೆಪಾಟಲಿಗೆ ತುತ್ತಾಗುತ್ತೀರಿ" ಎಂದು ಟೀಕಿಸಿದೆ.
"ನಗರದ ಮೂಲಸೌಕರ್ಯದ ಬಗ್ಗೆ ಉದ್ಯಮಿಗಳು ಕಳವಳಗೊಂಡಾಗ ಅವರಿಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ನೈತಿಕ ಸ್ಥೈರ್ಯ ತುಂಬಿದ್ದಾರೆ. ಅದರಲ್ಲಿ ತಪ್ಪೇನಿದೆ? ಕೇಂದ್ರದ ಅನುದಾನ ತರಲಿ ಎನ್ನುತ್ತೀರಿ? ಟ್ವಿಟ್ಟರ್ ಗಿಟ್ಟರ್ ಎನ್ನುತ್ತೀರಿ.. ಆ ಬಗ್ಗೆ ಆಮೇಲೆ ಹೇಳೋಣ. ತೆರಿಗೆ ಬೀಜಾಸುರ ನಂತೆ ಬೆಂಗಳೂರು ಜನರ ರಕ್ತ ಹೀರಿ ತೆರಿಗೆ ಪೀಕುತ್ತಿದ್ದೀರಲ್ಲ.. ಮೊದಲು ಅದಕ್ಕೆ ಲೆಕ್ಕ ಮಡಗಿ. ಅದು ಯಾರಪ್ಪನ ದುಡ್ಡು ಅಲ್ಲ. ಜನರ ಬೆವರಿನ ಹಣ. ಆ ದುಡ್ಡು ಎಲ್ಲಿ ಹೋಗುತ್ತಿದೆ? ಅದನ್ನೇ ಕುಮಾರಸ್ವಾಮಿ ಅವರು ಕೇಳಿದ್ದು. ಉದ್ಯಮಿಗಳಿಗೆ ಧಮ್ಕಿ ಹಾಕಿ, ದಾದಾಗಿರಿ ಮಾಡುವುದಕ್ಕೆ ನಿಮ್ಮನ್ನು ಡಿಸಿಎಂ ಮಾಡಿಲ್ಲ ಮಿ. ಶಿವಕುಮಾರ್. ಕೆಲಸ ಮಾಡಿ ಎಂದು ಜನ ಕೂರಿಸಿದ್ದಾರೆ. ಆ ಹಳೆಯ ಚಾಳಿ ಬಿಡಿ. ದಾದಾಗಿರಿಯ ದಿನಗಳು ಮುಗಿದವು. ಮೊದಲು ರಸ್ತೆ ಗುಂಡಿ ಮುಚ್ಚಿ ಮಾನ ಕಾಪಾಡಿಕೊಳ್ಳಿ. ಕೈಯಲ್ಲಿ ಆಗಲಿಲ್ಲ ಎಂದರೆ, ಬೆಂಗಳೂರು ಉಸ್ತುವಾರಿ ಬಿಡಿ. ಟ್ವಿಟ್ಟರ್ ಗಿಟ್ಟರ್ ಎಂದು ನಾಲಿಗೆ ಜಾರಬೇಡಿ. ಜಗತ್ತಿನಲ್ಲಿ ಏನೇನು ಆಗುತ್ತಿದೆ ಎಂಬುದನ್ನು ಗಮನಿಸಿ" ಎಂದು ಹೇಳಿದೆ.







