ಬೆಂಗಳೂರು | ಯುವತಿಗೆ ಚಾಕು ಇರಿತ : ಆರೋಪಿಯ ಬಂಧನ

ಬೆಂಗಳೂರು, ಸೆ.19 : ಲೈಂಗಿಕವಾಗಿ ಸಹಕರಿಸುವಂತೆ ಒತ್ತಾಯಿಸಿ ಪಶ್ಚಿಮ ಬಂಗಾಳ ಮೂಲದ 24 ವರ್ಷದ ಯುವತಿಗೆ ಚಾಕು ಇರಿದಿದ್ದ ಪ್ರಕರಣದಡಿ ಆರೋಪಿಯನ್ನು ಇಲ್ಲಿನ ವೈಟ್‍ಫೀಲ್ಡ್ ಠಾಣೆ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಆಂಧ್ರಪ್ರದೇಶ ಮೂಲದ ಬಾಬು ಎಂಬಾತ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಸೆ.16ರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ವೈಟ್‍ಫೀಲ್ಡ್ ಠಾಣೆ ವ್ಯಾಪ್ತಿಯ ಕೋ-ಲಿವಿಂಗ್ ಪಿ.ಜಿ.ಯೊಂದರಲ್ಲಿ ಯುವತಿಗೆ ಚಾಕು ಇರಿಯಲಾಗಿತ್ತು.
ಬ್ಯಾಂಕ್ ಉದ್ಯೋಗಿಯಾಗಿರುವ ಯುವತಿಗೆ 3 ತಿಂಗಳ ಹಿಂದಷ್ಟೇ ಕೋ-ಲಿವಿಂಗ್ ಪಿ.ಜಿ.ಯಲ್ಲೇ ಬಾಬುನ ಪರಿಚಯವಾಗಿತ್ತು. ಸೆ.16ರ ಬೆಳಗಿನ ಜಾವ ಯುವತಿಯ ರೂಮ್‍ಗೆ ಹೋಗಿದ್ದ ಆರೋಪಿ, ಲೈಂಗಿಕವಾಗಿ ಸಹಕರಿಸುವಂತೆ ಒತ್ತಾಯಿಸಿದ್ದ. ಸಮ್ಮತಿಸದಿದ್ದಾಗ ಚಾಕುವಿನಿಂದ ಆಕೆಯ ಬೆನ್ನಿಗೆ ಇರಿದು ಗಾಯಗೊಳಿಸಿದ್ದ.
ಬಳಿಕ ಯುವತಿಯ ಖಾಸಗಿ ಫೋಟೋ ಕ್ಲಿಕ್ಕಿಸಿಕೊಂಡಿದ್ದ ಆರೋಪಿ, 70 ಸಾವಿರ ರೂ.ಹಣಕ್ಕೆ ಬೇಡಿಕೆಯಿಟ್ಟಿದ್ದ. ಅಷ್ಟು ಹಣ ಇಲ್ಲ ಎಂದಾಗ ಆಕೆಯ ಮೊಬೈಲ್ ಫೋನ್ ಪಡೆದುಕೊಂಡು 14 ಸಾವಿರ ರೂ. ಹಣವನ್ನು ಆನ್‍ಲೈನ್ ಮೂಲಕ ವರ್ಗಾಯಿಸಿಕೊಂಡಿದ್ದ.
ಅನಂತರ ತನ್ನ ಸ್ನೇಹಿತೆಗೆ ಕರೆ ಮಾಡಿದ್ದ ಯುವತಿ, ಆಕೆಯ ನೆರವಿನೊಂದಿಗೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಳು. ಆಸ್ಪತ್ರೆಯಿಂದ ಬಂದ ವರದಿ ಆಧರಿಸಿ ವೈಟ್‍ಫೀಲ್ಡ್ ಠಾಣೆ ಪೊಲೀಸರು ಯುವತಿಯಿಂದ ದೂರು ಪಡೆದು ಪ್ರಕರಣ ದಾಖಲಿಸಿಕೊಂಡಿದ್ದರು.
ಸದ್ಯ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ. ಆತ ಈ ಹಿಂದೆಯೂ ಇದೇ ರೀತಿಯ ಕೃತ್ಯ ಎಸಗಿರುವ ಆರೋಪವಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಬೆಂಗಳೂರು ಪೂರ್ವ ವಲಯದ ಜಂಟಿ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ತಿಳಿಸಿದ್ದಾರೆ.







