ಬೆಂಗಳೂರು | ರಸ್ತೆಯಲ್ಲಿ ‘ಚಿತ್ರಸಂತೆ’ ನಡೆಸಲು ಅನುಮತಿ ನೀಡಬೇಡಿ : ಪೊಲೀಸ್ ಆಯುಕ್ತರಿಗೆ ಮನವಿ

ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು, ಸೆ.19 : ಪ್ರತಿವರ್ಷವೂ ಚಿತ್ರಕಲಾ ಪರಿಷತ್ತು ನಗರದ ವಿಂಡ್ಸನ್ ಮ್ಯಾನರ್ ಸರ್ಕಲ್ನಿಂದ ಶಿವಾನಂದ ಸರ್ಕಲ್ವರೆಗೆ ರಸ್ತೆಯನ್ನು ಸಂಪೂರ್ಣವಾಗಿ ಬಂದ್ ಮಾಡಿ ಚಿತ್ರಸಂತೆ ನಡೆಸುತ್ತಿದ್ದು, ಈ ಬಾರಿ ರಸ್ತೆ ಬಂದ್ ಮಾಡಲು ಅನುಮತಿ ನೀಡಬಾರದೆಂದು ಕೋರಿ ನಗರ ಪೊಲೀಸ್ ಆಯುಕ್ತರು ಹಾಗೂ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತರಿಗೆ ನೈಜ ಹೋರಾಟಗಾರರ ವೇದಿಕೆಯ ನಿಯೋಗ ಮನವಿ ಮಾಡಿದೆ.
ಶುಕ್ರವಾರ ವೇದಿಕೆ ವತಿಯಿಂದ ಸಾಮಾಜಿಕ ಹೋರಾಟಗಾರ ಎಚ್.ಎಂ.ವೆಂಕಟೇಶ್ ನೇತೃತ್ವದ ನಿಯೋಗ ಪತ್ರ ಬರೆದಿದ್ದು, ಪ್ರತಿವರ್ಷ ಜನವರಿಯಲ್ಲಿ ಚಿತ್ರಕಲಾ ಪರಿಷತ್ ಕುಮಾರಕೃಪಾ ರಸ್ತೆಯಲ್ಲಿ ಚಿತ್ರಸಂತೆಯನ್ನು ಆಯೋಜಿಸುತ್ತಿದೆ. ನೈಜ ಹೋರಾಟಗಾರರ ವೇದಿಕೆಯು ಈ ರೀತಿ ರಸ್ತೆ ಬಂದ್ ಮಾಡಿ ಚಿತ್ರಸಂತೆ ನಡೆಸುವುದನ್ನು ವಿರೋಧಿಸುತ್ತಿದ್ದು ರಸ್ತೆ ಬಂದ್ ಮಾಡಲು ಅವಕಾಶ ನೀಡಬಾರದು ಎಂದು ತಿಳಿಸಲಾಗಿದೆ.
ಚಿತ್ರ ಸಂತೆಯಲ್ಲಿ ದೇಶದ ವಿವಿಧ ಭಾಗಗಳಿಂದ ಬಂದ ಚಿತ್ರ ಕಲಾಕಾರರು ತಾವು ಬಿಡಿಸಿದ ಚಿತ್ರಗಳನ್ನು ಮಾರಾಟ ಮಾಡುವ ಮೂಲಕ ಲಕ್ಷಾಂತರ ರೂ.ಗಳ ವ್ಯವಹಾರವನ್ನು ಸಾರ್ವಜನಿಕರ ರಸ್ತೆ ಮತ್ತು ಫುಟ್ಪಾತ್ ಮಾರ್ಗದಲ್ಲಿ ನಡೆಸುತ್ತಿದ್ದಾರೆ. ನೈಜ ಹೋರಾಟಗಾರರ ವೇದಿಕೆಯು ಚಿತ್ರಕಲೆಯನ್ನು ಪ್ರೊತ್ಸಾಹಿಸುತ್ತಿದ್ದು, ಚಿತ್ರಕಲೆಯ ಬಗ್ಗೆ ಅಪಾರವಾದ ಗೌರವವಿದೆ. ಆದರೆ ಸಾರ್ವಜನಿಕ ರಸ್ತೆ ಮತ್ತು ಪಾದಾಚಾರಿ ಮಾರ್ಗವನ್ನು ಸಂಪೂರ್ಣವಾಗಿ ಬಂದ್ ಮಾಡಿ ಚಿತ್ರ ಸಂತೆ ನಡೆಸುವ ಬಗ್ಗೆ ನಮ್ಮ ವಿರೋಧವಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಚಿತ್ರಕಲಾ ಪರಿಷತ್ ಆಡಳಿತ ಮಂಡಳಿಯು ಸಾರ್ವಜನಿಕ ರಸ್ತೆಯನ್ನು ಮತ್ತು ಪಾದಾಚಾರಿ ರಸ್ತೆಯನ್ನು ಈ ರೀತಿ ಅಕ್ರಮವಾಗಿ ಬಳಸಿಕೊಳ್ಳುವುದು ಅಥವಾ ಸರಕಾರ ಅದಕ್ಕೆ ಅವಕಾಶ ಮಾಡಿಕೊಡುವುದು ಪಾದಾಚಾರಿ ಮಾರ್ಗ ಮತ್ತು ಸಂಚಾರ ಮಾರ್ಗವನ್ನು ಉಲ್ಲಂಘಿಸಿದಂತೆ ಆಗುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.







