ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಆಗುವ ಪ್ರಯೋಜನವೇ ಅಭಿವೃದ್ಧಿಯ ಮಾನದಂಡ : ಡಿ.ಉಮಾಪತಿ

ಬೆಂಗಳೂರು, ಸೆ.19: ‘ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಆಗುವ ಪ್ರಯೋಜನವೇ ಅಭಿವೃದ್ಧಿಯ ಮಾನದಂಡವಾಗಿದ್ದು, ಇದನ್ನು ನಾವೆಲ್ಲ ಮರೆತುಹೋಗಿದ್ದೇವೆ’ ಎಂದು ‘ವಡ್ಡರ್ಸೆ ರಘುರಾಮ ಶೆಟ್ಟಿ ಸಾಮಾಜಿಕ ನ್ಯಾಯ ಪತ್ರಿಕೋದ್ಯಮ ಪ್ರಶಸ್ತಿ’ ಪುರಸ್ಕೃತ ಹಿರಿಯ ಪತ್ರಕರ್ತ ಡಿ.ಉಮಾಪತಿ ಬೇಸರ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಇಲ್ಲಿನ ವಾರ್ತಾಸೌಧದ ಸುಲೋಚನಾ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರದಾನ ಸಮಾರಂಭದಲ್ಲಿ 2024ನೆ ಸಾಲಿನ ‘ವಡ್ಡರ್ಸೆ ರಘುರಾಮ ಶೆಟ್ಟಿ ಸಾಮಾಜಿಕ ನ್ಯಾಯ ಪತ್ರಿಕೋದ್ಯಮ ಪ್ರಶಸ್ತಿ’ಯನ್ನು ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಪರಿಸರ ಮತ್ತು ಅಭಿವೃದ್ಧಿಯ ವ್ಯಾಖ್ಯಾನಗಳೇ ಬದಲಾಗುತ್ತಿದ್ದು, ಇದು ಅಪಾಯಕಾರಿ ಕಾಲಮಾನದ ಸೂಚಕವಾಗಿದೆ. ಮರೆತು ಹೋಗಿರುವ ಅಭಿವೃದ್ಧಿಯ ಮಾನದಂಡವನ್ನು ಮತ್ತೇ ಹುಡುಕಿ, ಅದರ ಜಾಗದಲ್ಲಿ ಪ್ರತಿಷ್ಟಾನ ಮಾಡಬೇಕಾಗಿದೆ. ಇದು ಸರಕಾರ, ಸಮಾಜ ಮತ್ತು ಪತ್ರಿಕೋದ್ಯಮ ಜೊತೆಗೂಡಿ ಮಾಡಬೇಕಾದ ಸಾಮೂಹಿಕ ಜವಾಬ್ದಾರಿ ಎಂದರು.
ಮಾಧ್ಯಮ ನಿಷ್ಪಕ್ಷಪಾತವಾಗಿರಬೇಕು ಎನ್ನುವುದು ಆಕರ್ಷಕ ಸುಳ್ಳು. ಹೊಸಕಾಲದ ಮಾಧ್ಯಮ ಸತ್ಯ, ನ್ಯಾಯ ಮತ್ತು ಪ್ರೀತಿ ಈ ಮೂರು ಮೌಲ್ಯಗಳ ಪಕ್ಷಪಾತಿ ಆಗರಬೇಕು. ಆದರೆ, ಈಗಿನ ಕೆಲವು ಮಾಧ್ಯಮಗಳು ಸತ್ಯ, ನ್ಯಾಯವನ್ನು ಮರೆಮಾಚಿ ವರದಿಗಳನ್ನು ಮಾಡುತ್ತಿರುವುದು ಖೇಧಕರ ಸಂಗತಿಯಾಗಿದೆ ಎಂದು ಅವರು ತಿಳಿಸಿದರು.
ಕನ್ನಡ ಪತ್ರಿಕೋದ್ಯಮ ಚರಿತ್ರೆಯಲ್ಲಿ ಅಪ್ಪಟ ಜನಪರ ಅಧ್ಯಾಯ ಕಟ್ಟಿದ ಕೆಲವೇ ಧೀಮಂತರ ಪೈಕಿ ವಡ್ಡರ್ಸೆ ಅವರು ಒಬ್ಬರಾಗಿದ್ದರು. ಸಾಮಾನ್ಯ ಓದುಗರು ಪತ್ರಿಕೆಯ ಒಡೆಯರಾಗಬೇಕು ಎನ್ನುವ ಕನಸ್ಸನ್ನು ನನಸು ಮಾಡಲು ತಮ್ಮ ಬದುಕಿನ ಬಹುಭಾಗವನ್ನು ಮೀಸಲಿಟ್ಟಿದ್ದರು. ವಡ್ಡರ್ಸೆ ಹೆಸರಿನಲ್ಲಿ ನನಗೆ ಕೊಡುತ್ತಿರುವ ಹಣವನ್ನು ಈ ದಿನ ಸಂಸ್ಥೆಗೆ ಸಲ್ಲಿಸುತ್ತಿದ್ದೇನೆ ಎಂದು ಅವರು ತಿಳಿಸಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಹೇಮಂತ್ ನಿಂಬಾಳ್ಕರ್ ಮಾತನಾಡಿ, ‘ಸರಕಾರವು ಎರಡು ವರ್ಷಗಳಿಂದ ಪತ್ರಕರ್ತರಿಗೆ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಗ್ರಾಮೀಣ ಪತ್ರಕರ್ತರಿಗೆ ಬಸ್‍ಪಾಸ್, ಆರೋಗ್ಯ ಸಂಜೀವಿನಿ ಯೋಜನೆಯನ್ನು ಜಾರಿಗೊಳಿಸಿದೆ. ಸಂಕಷ್ಟದಲ್ಲಿರುವ ಪತ್ರಕರ್ತರ ಮಾಸಾಶನ, ಕುಟುಂಬ ಮಾಸಾಶನವನ್ನು ನೀಡಿದೆ. ಪತ್ರಕರ್ತರಿಗಾಗಿ ಮೀಡಿಯಾ ಫೆಸ್ಟ್, ಕಾರ್ಯಾಗಾರಗಳು ಇಂತಹ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರೊಂದಿಗೆ ಕ್ಯಾಮೆರಾ, ಲ್ಯಾಪ್‍ಟಾಪ್ ಹಾಗೂ ಇನ್ನಿತರ ಉಪಕರಣಗಳನ್ನು ಒಳಗೊಂಡ ಮಾಧ್ಯಮ ಕಿಟ್‍ಗಳನ್ನು ವಿತರಿಸಿದೆ ಎಂದರು.







