ಬೆಂಗಳೂರು | ಜಾಲತಾಣದಲ್ಲಿ ಹಳೆಯ ವೀಡಿಯೊ ಹಂಚಿಕೊಂಡ ಯುವತಿಯ ಬಂಧನ, ಬಿಡುಗಡೆ

ಬೆಂಗಳೂರು, ಸೆ.20: ಸಾಮಾಜಿಕ ಜಾಲತಾಣದಲ್ಲಿ ಹಳೆಯ ವೀಡಿಯೊವೊಂದನ್ನು ಹಂಚಿಕೊಂಡಿದ್ದ ಯುವತಿಯೊಬ್ಬಳನ್ನು ಪುಲಿಕೇಶಿನಗರ ಠಾಣೆ ಪೊಲೀಸರು ಬಂಧಿಸಿ, ನಂತರ ಆಕೆಗೆ ಎಚ್ಚರಿಕೆ ನೀಡಿ ಠಾಣಾ ಜಾಮೀನಿನಡಿ ಬಿಡುಗಡೆಗೊಳಿಸಿರುವ ಘಟನೆ ವರದಿಯಾಗಿದೆ.
ಕೋಣನಕುಂಟೆ ನಿವಾಸಿ ಶಹಾಜಹಾನ್(36) ಎಂಬಾಕೆಯನ್ನು ಬಂಧಿಸಿ ನಂತರ ಜಾಮೀನಿನಡಿ ಬಿಡುಗಡೆಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವೈರಲ್ ವೀಡಿಯೊ, ಫೋಟೊ, ಸುದ್ದಿಗಳನ್ನು ತನ್ನ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದ ಶಹಾಜಹಾನ್, ಅದೇ ರೀತಿ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದ್ದ ಹಳೆಯ ಘಟನೆಯೊಂದರ ವೀಡಿಯೊವನ್ನು ‘ಬೆಂಗಳೂರಿನಲ್ಲಿ ರೌಡಿಗಳ ಪುಂಡಹಾಸ’ ಎಂಬ ಶೀರ್ಷಿಕೆಯಡಿ ಸೆ.6ರಂದು ಹಂಚಿಕೊಂಡಿದ್ದರು.
ವೀಡಿಯೊವನ್ನು ಲಕ್ಷಾಂತರ ಜನ ವೀಕ್ಷಿಸಿದ್ದರು. ವೀಡಿಯೊ ವೈರಲ್ ಆಗುತ್ತಿದ್ದಂತೆ ಶಹಾ ಜಹಾನ್‌ಳನ್ನು ಪತ್ತೆಹಚ್ಚಿದ್ದ ಪೊಲೀಸರು ವಿವರಣೆ ಕೇಳಿದಾಗ ಆಕೆ ಪರಿಶೀಲಿಸದೇ ಹಳೆಯ ಘಟನೆಯ ವೀಡಿಯೊವನ್ನು ಬೆಂಗಳೂರಿನಲ್ಲಿ ನಡೆದಿದೆ ಎಂದು ಹಂಚಿಕೊಂಡಿರುವುದು ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡು ಶಹಾಜಹಾನ್‌ಳನ್ನು ಬಂಧಿಸಿದ್ದ ಪೊಲೀಸರು ಎಚ್ಚರಿಕೆ ನೀಡಿ, ಜಾಮೀನಿನನ್ವಯ ಬಿಡುಗಡೆಗೊಳಿಸಿರುವುದಾಗಿ ತಿಳಿಸಿದ್ದಾರೆ.





