ರಸ್ತೆ ನಿರ್ವಹಣೆ ಕೈಗೊಳ್ಳದಿದ್ದರೆ ಕಠಿಣ ಕ್ರಮ : ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಬೆಂಗಳೂರು ನಗರದಲ್ಲಿನ ರಸ್ತೆ ಗುಂಡಿಗಳ ಸಮಸ್ಯೆ ಹಿನ್ನೆಲೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ರಸ್ತೆ ನಿರ್ವಹಣೆಗೆ ಸೂಕ್ತ ಕ್ರಮ ವಹಿಸದ ಅಧಿಕಾರಿಗಳ ಮೇಲೆ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಶನಿವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ಸಭೆ ನಡೆಸಿದ ಸಿದ್ದರಾಮಯ್ಯ, ಹಾಳಾಗಿರುವ ನಗರದ ರಸ್ತೆ ಗುಂಡಿಗಳಿಂದ ಜನ ಹೈರಾಣಾಗಿದ್ದು, ಜನರ ಪ್ರತಿನಿತ್ಯದ ಸಂಕಷ್ಟ ನಿಮ್ಮ ಕಣ್ಣಿಗೆ ಬೀಳುತ್ತಿಲ್ಲವಾ? ತುರ್ತು ಕ್ರಮ ಏಕೆ ತೆಗೆದುಕೊಳ್ಳುತ್ತಿಲ್ಲ ಎಂದು ಖಾರವಾಗಿ ಪ್ರಶ್ನಿಸಿದರು.
ಪ್ರತಿ ವಾರ್ಡ್ ನ ಎಂಜಿನಿಯರ್ ಗಳು , ಮುಖ್ಯ ಎಂಜಿನಿಯರ್ ಗಳು ಏನು ಮಾಡುತ್ತಿದ್ದಾರೆ?. ಇನ್ನು ಒಂದು ತಿಂಗಳ ಕಾಲಾವಕಾಶ ನೀಡುತ್ತೇವೆ. ರಸ್ತೆ ಗುಂಡಿಗಳನ್ನು ಮುಚ್ಚಲು ಕಟ್ಟುನಿಟ್ಟಿನ ಕ್ರಮ ವಹಿಸಲೇಬೇಕು ಮತ್ತು ರಸ್ತೆ ಗಳನ್ನು ಸಂಚಾರ ಯೋಗ್ಯ ಮಾಡಲೇಬೇಕು ಎಂದು ಸಿದ್ದರಾಮಯ್ಯ ಸೂಚಿಸಿದರು.
ಗುತ್ತಿಗೆದಾರರೊಂದಿಗೆ ಶಾಮೀಲಾಗದೆ ಒದಗಿಸಿರುವ ಅನುದಾನಕ್ಕೆ ಗುಣಮಟ್ಟದ ಕಾಮಗಾರಿಗಳನ್ನು, ವೈಜ್ಞಾನಿಕವಾದ ಕಾಮಗಾರಿಗಳನ್ನು ಪೂರೈಸಲು ಕ್ರಮ ವಹಿಸಬೇಕು. ಮಳೆಗಾಲಕ್ಕೆ ಮುನ್ನವೇ ರಸ್ತೆ ಕಾಮಗಾರಿಗಳನ್ನು ಯಾಕೆ ಮಾಡುತ್ತಿಲ್ಲ, ಮಳೆಗಾಲದಲ್ಲಿಯೇ ಏಕೆ ಪ್ರಾರಂಭಿಸುವಿರಿ? ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ನೂತನವಾಗಿ ನೇಮಕಗೊಂಡಿರುವ ಆಯುಕ್ತರು ಫೀಲ್ಡ್ ವರ್ಕ್ ಮಾಡಿ, ನಿಗಾ ಇರಿಸಬೇಕು ಎಂದು ಅವರು ತಿಳಿಸಿದರು.
ಬಿಡಿಎ, ಬಿಎಂಆರ್ ಸಿಎಲ್, ಜಲಮಂಡಳಿ ಅಧಿಕಾರಿಗಳ ನಡುವೆ ಸಮನ್ವಯವೇ ಇರುವುದಿಲ್ಲ. ರಸ್ತೆ ಗುಂಡಿಗಳನ್ನು ಮುಚ್ಚಲು ಹಾಗೂ ಎಲ್ಲ ರಸ್ತೆಗಳನ್ನು ಸಂಚಾರ ಯೋಗ್ಯ ಮಾಡಲು ಒಂದು ತಿಂಗಳ ಗಡುವು ನೀಡಲಾಗುವುದು, ಎಲ್ಲ ಇಲಾಖೆಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಅವರು ಸೂಚನೆ ನೀಡಿದರು.
ಮುಖ್ಯ ಆಯುಕ್ತರು ಪ್ರತಿವಾರ ಐದೂ ವಲಯಗಳ ಆಯುಕ್ತರೊಂದಿಗೆ ಸಭೆ ನಡೆಸಿ, ನಿರಂತರ ಸಂಪರ್ಕದಲ್ಲಿರಬೇಕು. ಹಣದ ಕೊರತೆಯಿದ್ದರೆ ಆರ್ಥಿಕ ಇಲಾಖೆಯಿಂದ ಬಿಡುಗಡೆಗೊಳಿಸಲು ಕ್ರಮ ಕೈಗೊಳ್ಳುತ್ತೇವೆ . ಆದ್ಯತೆ ಮೇರೆಗೆ ಕ್ರಮ ವಹಿಸಿ. ಒಂದು ತಿಂಗಳ ನಂತರ ಮತ್ತೆ ಮೌಲ್ಯ ಮಾಪನ ನಡೆಸಲಾಗುವುದು ಎಂದು ಅವರು ಹೇಳಿದರು.







