ಧರ್ಮದ ಕಾಲಂನಲ್ಲಿ ‘ವಿಶ್ವಮಾನವ ಧರ್ಮ’ ಎಂದು ಬರೆಸುವಂತೆ ಒತ್ತಾಯ

ಸಾಂದರ್ಭಿಕ ಚಿತ್ರ
ಬೆಂಗಳೂರು, ಸೆ.21: ರಾಜ್ಯಾದ್ಯಂತ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ ಸೆ.22ರಿಂದ ಆರಂಭವಾಗುತ್ತಿದ್ದು, ಒಕ್ಕಲಿಗ ಸಮುದಾಯದವರು ಸೇರಿದಂತೆ ಎಲ್ಲ ತಳ ಸಮುದಾಯದವರು ಧರ್ಮದ ಕಾಲಂನಲ್ಲಿ ‘ವಿಶ್ವಮಾನವ ಧರ್ಮ’ ಎಂದು ಬರೆಸಬೇಕು ಎಂದು ವಿಶ್ವಮಾನವ ಧರ್ಮ ಆಂದೋಲನ ಸಮಿತಿಯು ಮನವಿ ಮಾಡಿದೆ.
ರವಿವಾರ ಸಮಿತಿಯ ಮುಖಂಡರಾದ ನಾದಾನಂದನಾಥ ಸ್ವಾಮೀಜಿ, ಪ್ರೊ.ಎಲ್.ಎನ್.ಮುಕುಂದರಾಜು, ತಲಕಾಡು ಚಿಕ್ಕರಂಗೇಗೌಡ, ಜಾಣಗೆರೆ ವೆಂಕಟರಾಮಯ್ಯ, ಕುಮಾರ್ ಕೆ.ಎಚ್., ಡಾ.ಮಂಜುನಾಥ್ ಅದ್ದೆ, ಡಾ.ರವೀಂದ್ರಗೌಡ, ಅರಳುಕುಪ್ಪೆ ನಾಗೇಶ್, ಹನುಮೇಗೌಡ ನಂಜಪ್ಪ, ಡಾ.ಎ.ಆರ್.ಗೋವಿಂದಸ್ವಾಮಿ ಸೇರಿದಂತೆ 30ಕ್ಕೂ ಅಧಿಕ ಮಂದಿ ಜಂಟಿ ಪ್ರಕಟನೆ ಹೊರಡಿಸಿದ್ದಾರೆ.
ಒಕ್ಕಲಿಗರು ಸೇರಿ ಬುದ್ದ, ಬಸವಣ್ಣ, ಗಾಂಧಿ, ಅಂಬೇಡ್ಕರ್, ನಾರಾಯಣಗುರು, ಕುವೆಂಪು, ಕನಕನಾಯಕ ಅನುಯಾಯಿಗಳು, ಅಂತರ್ ಜಾತಿ ವಿವಾಹಿತರು, ಅಂತರ್ ಧರ್ಮೀಯ ವಿವಾಹಿತರು, ಕುವೆಂಪು ವಿಚಾರದಾರೆಗಳ ಒಪ್ಪಿಕೊಂಡವರು, ಮಂತ್ರ ಮಾಂಗಲ್ಯ ಮಾಡಿಕೊಂಡವರು, ದಲಿತ ಸಮುದಾಯದ ಎಲ್ಲ ವರ್ಗಗಳ ಜನರು, ಶುಶಿಕ್ಷಿತರು, ಶ್ರೇಣಿಕೃತ ಸನಾತನ ವರ್ಣವ್ಯವಸ್ಥೆಯ ಶೋಷಣೆಗೆ ಒಳಗಾದವರು, ತಬ್ಬಲಿ ಸಮುದಾಯಗಳಿಗೆ ಸೇರಿದವರು, ಅಲೆಮಾರಿ ಆದಿವಾಸಿ ಜನಾಂಗದವರು ಧರ್ಮದ ಕಾಲಂನಲ್ಲಿ ವಿಶ್ವಮಾನವ ಧರ್ಮ ಎಂದು ಬರೆಸಬೇಕು ಎಂದು ಸಮಿತಿಯು ಮನವಿ ಮಾಡಿದೆ.
ಒಕ್ಕಲಿಗರು ಸೇರಿ ಇತರ ಕೆಳ ಸಮುದಾಯಗಳು ಮೂಲತಃ ಹಿಂದೂಗಳಲ್ಲ. ಒಕ್ಕಲಿಗರನ್ನು ರಾಮಾನುಜಾಚಾರ್ಯರು ವೈಷ್ಣವ ಧರ್ಮ ದೀಕ್ಷೆ ನೀಡಿ, ಒಕ್ಕಲಿಗ ಸಮುದಾಯದ ರಾಜನನ್ನು ವಿಷ್ಣುವರ್ಧನ ಎಂದು ಹೆಸರಿಸಿ, ಅವನ ಪ್ರಜೆಗಳಾಗಿದ್ದ ನಮ್ಮ ಪೂರ್ವಜರನ್ನು ಹಿಂದುಗಳೆಂದು ನಂಬಿಸಲಾಗಿದೆ ಎಂದು ಸಮಿತಿ ತಿಳಿಸಿದೆ.
ಒಕ್ಕಲಿಗ ಕುಲಕ್ಕೆ ಸೇರಿದ ಹಾಸನ, ಮಂಡ್ಯ, ಮೈಸೂರು, ಚಿಕ್ಕಮಗಳೂರು, ಶಿವಮೊಗ್ಗ, ತುಮಕೂರು, ಕೋಲಾರ, ಬೆಂಗಳೂರು ಮುಂತಾದ ಜಿಲ್ಲೆಗಳಲ್ಲಿದ್ದ ಬಹುಸಂಖ್ಯಾತ ಒಕ್ಕಲಿಗ ಪ್ರಜೆಗಳು ತಮ್ಮ ಧರ್ಮವನ್ನು ವೈಷ್ಣವ ಧರ್ಮ ಎಂದು ಬದಲಾಯಿಸಿಕೊಂಡಿದ್ದಾರೆ ಎಂದು ಸಮಿತಿಯು ಸ್ಪಷ್ಟಪಡಿಸಿದೆ.
ಅಲ್ಲಿಂದ ಆಚೆಗೆ ಚಾತುರ್ವರ್ಣದ ನೀತಿಯಂತೆ ದುಡಿಮೆಗಾರರಾಗಿದ್ದ ಒಕ್ಕಲಿಗರು ಶೂದ್ರರೆಂದು ಕರೆಸಿಕೊಳ್ಳತೊಡಗಿದರು. ಆ ಕಾಲದ ಬ್ರಾಹ್ಮಣ ಧರ್ಮವನ್ನೇ ಈಗಲೂ ಹಿಂದೂ ಧರ್ಮ ಎಂದು ನಂಬಿ ಕರೆದುಕೊಳ್ಳುತ್ತಿದ್ದಾರೆ. ಹಿಂದೂ ಧರ್ಮವು ಶೂದ್ರ, ದಲಿತ ಹಾಗೂ ಮಹಿಳೆಯರಿಗೆ ವಿದ್ಯೆಯನ್ನು ನಿರಾಕರಿಸಿದೆ. ಇದನ್ನೆಲ್ಲಾ ಗಮನಿಸಿದ ಮಹಾಕವಿ ಕುವೆಂಪು ವಿಶ್ವಮಾನವ ಧರ್ಮವನ್ನು ಪ್ರತಿಪಾದಿಸಿ ಕೊಟ್ಟಿದ್ದಾರೆ ಎಂದು ಸಮಿತಿಯು ವಿವರಿಸಿದೆ.
ಒಕ್ಕಲಿಗ ಜನಾಂಗ ಮಹಾಕವಿ ಕುವೆಂಪು ಆಶಯವನ್ನು ಅರ್ಥ ಮಾಡಿಕೊಂಡು, ಅವರು ತೋರಿಸಿಕೊಟ್ಟ ವಿಶ್ವಮಾನವ ಧರ್ಮವನ್ನು ಅನುಸರಿಸಬೇಕಾದ ಅಗತ್ಯವಿದೆ. ಕುವೆಂಪು ಅವರ ಮುಖ್ಯ ಉದ್ದೇಶ ಕೇವಲ ಒಕ್ಕಲಿಗರಿಗೆ ಮಾತ್ರವಲ್ಲ, ಎಲ್ಲ ಜಾತಿ, ಮತ, ಧರ್ಮಗಳಿಗೂ ಅನ್ವಯವಾಗಲಿದೆ ಎಂದು ಸಮಿತಿಯು ಹೇಳಿದೆ.
ಕುವೆಂಪು ಅವರು ಬರೆದ ವಿಶ್ವಮಾನವ ಸಂದೇಶ ಮತ್ತಿತರ ಎಲ್ಲ ಕೃತಿಗಳು ನಮ್ಮ ಧರ್ಮಗ್ರಂಥವಾಗಿದೆ. ಹೀಗಾಗಿ ಸಮೀಕ್ಷೆಯ ಸಂದರ್ಭದಲ್ಲಿ ಒಕ್ಕಲಿಗರು ಸೇರಿ ತಳ ಸಮುದಾಯದವರು ವಿಶ್ವಮಾನವ ಧರ್ಮ ಎಂದು ಬರೆಸಿ, ಒಂದು ಪುಟ್ಟ ಹೆಜ್ಜೆಯನ್ನು ಇಟ್ಟರೆ ಮುಂದಿನ ದಿನಗಳಲ್ಲಿ ನಮ್ಮ ಧರ್ಮಕ್ಕೆ ಪ್ರತ್ಯೇಕ ಮಾನ್ಯತೆ ದೊರೆಯುತ್ತದೆ ಎಂದು ಸಮಿತಿಯು ತಿಳಿಸಿದೆ.







