‘ಟಿ.ಗಿರಿಜಾ ಸಾಹಿತ್ಯ ದತ್ತಿ ಪುರಸ್ಕಾರಕ್ಕೆ’ ಡಾ.ಬಿ.ಎಸ್.ಶೈಲಜ ಆಯ್ಕೆ

ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು, ಸೆ.22: ಕನ್ನಡ ಸಾಹಿತ್ಯ ಪರಿಷತ್ನ ಟಿ.ಗಿರಿಜಾ ದತ್ತಿ ಪುರಸ್ಕಾರಕ್ಕೆ ವಿಜ್ಞಾನ ಬರಹಗಾರ್ತಿ ಡಾ.ಬಿ.ಎಸ್.ಶೈಲಜ ಅವರನ್ನು ಆಯ್ಕೆ ಮಾಡಲಾಗಿದೆ.
ಟಿ.ಗಿರಿಜಾ ಅವರ ಹೆಸರಿನಲ್ಲಿ ದತ್ತಿ ಸ್ಥಾಪಿಸಿದ್ದು ಕನ್ನಡ ಸಾಹಿತ್ಯಕ್ಕೆ ಮಹತ್ವದ ಕೊಡುಗೆ ನೀಡಿದ ಲೇಖಕಿಯರಿಗೆ ಪುರಸ್ಕಾರ ನೀಡಲಾಗುತ್ತದೆ. ಕಸಾಪ ಅಧ್ಯಕ್ಷ ಮಹೇಶ ಜೋಶಿ ನೇತೃತ್ವದಲ್ಲಿ ಇತ್ತೀಚೆಗೆ ಕನ್ನಡ ಸಾಹಿತ್ಯ ಪರಿಷತ್ನಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ಡಾ.ಬಿ.ಎಸ್.ಶೈಲಜ ಅವರನ್ನು ದತ್ತಿ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.
ಡಾ.ಬಿ.ಎಸ್.ಶೈಲಜ ಅವರು ಭಾರತೀಯ ಭೌತ ವಿಜ್ಞಾನ ಸಂಸ್ಥೆಯಿಂದ ಡಾಕ್ಟರೇಟ್ ಪಡೆದ ಅವರು ಜವಾಹರ್ ಲಾಲ್ ನೆಹರೂ ತಾರಾಲಯದಲ್ಲಿ ಹಲವು ಮಹತ್ವದ ಹುದ್ದೆಗಳನ್ನು ನಿರ್ವಹಿಸಿದ್ದು, ಕನ್ನಡದಲ್ಲಿ ವಿಜ್ಞಾನವನ್ನು ಅದರಲ್ಲಿಯೂ ಭೌತ ವಿಜ್ಞಾನವನ್ನು ಜನಪ್ರಿಯಗೊಳಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ.
‘ರುದ್ರಪ್ರಯಾಗದ ನರಭಕ್ಷಕ ಚಿರತೆ’ ‘ಗಲಿವರನ ಪ್ರವಾಸ’ ಮಹತ್ವದ ಅನುವಾದಗಳಾಗಿವೆ. ‘ಖಗೋಳ ದರ್ಶನ’ ಎನ್ನುವ ಬೃಹತ್ ಸಂಪುಟವನ್ನು ಪ್ರಕಟಿಸಿ ಕನ್ನಡಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.







