ಬೆಂಗಳೂರು | ದ್ವಿಚಕ್ರ ವಾಹನಗಳ ಕಳ್ಳತನ ಮಾಡುತ್ತಿದ್ದವನ ಬಂಧನ

ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು, ಸೆ.23: ತಂದೆಯ ಕ್ಯಾನ್ಸರ್ ಚಿಕಿತ್ಸೆಗೆ ಹಣ ಹೊಂದಿಸಲು ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಓರ್ವ ಆರೋಪಿಯನ್ನು ವೈಟ್ಫೀಲ್ಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶದ ಅನಂತಪುರ ಮೂಲದ ಫಿರೋಜ್(24) ಬಂಧಿತ ಆರೋಪಿಯಾಗಿದ್ದು, ಆತನಿಂದ 20 ಲಕ್ಷ ರೂ. ಮೌಲ್ಯದ 20 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಚಾಲಕ ವೃತ್ತಿ ಮಾಡಿಕೊಂಡಿದ್ದ ಫಿರೋಜ್ ತನ್ನ ಪತ್ನಿ ಹಾಗೂ ಮಗುವಿನೊಂದಿಗೆ ಹೊಸಕೋಟೆಯ ಅನುಗೊಂಡನಹಳ್ಳಿ ವ್ಯಾಪ್ತಿಯಲ್ಲಿ ವಾಸವಾಗಿದ್ದನು. ತಂದೆಯ ಚಿಕಿತ್ಸೆಗೆ ಹಣ ಹೊಂದಿಸಲಾಗದೇ ಪರದಾಟ ನಡೆಸಿದ್ದ ಫಿರೋಜ್, ಒಮ್ಮೆ ದ್ವಿಚಕ್ರ ವಾಹನವೊಂದನ್ನು ಕದ್ದು ಮಾರಾಟ ಮಾಡುವುದರಲ್ಲಿ ಯಶಸ್ವಿಯಾಗಿದ್ದ ಎಂದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನಂತರ ಕಳ್ಳತನವನ್ನೇ ಕಾಯಕ ಮಾಡಿಕೊಂಡ ಆರೋಪಿಯು ಪಾರ್ಕಿಂಗ್ ಸ್ಥಳಗಳಲ್ಲಿ ದ್ವಿಚಕ್ರ ವಾಹನಗಳ ಹ್ಯಾಂಡಲ್ ಲಾಕ್ ಮುರಿದು ಕಳ್ಳತನ ಮಾಡಿ, ಮಂಡ್ಯ ಮತ್ತು ಆಂಧ್ರಪ್ರದೇಶದಲ್ಲಿ ಮಾರಾಟ ಮಾಡಿ ಹಣ ಗಳಿಸುತ್ತಿದ್ದನು. ಕೊನೆಗೆ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. 12 ದ್ವಿಚಕ್ರ ವಾಹನಗಳ ವಾರಸುದಾರರು ಪತ್ತೆಯಾಗಿದ್ದು, ಇನ್ನುಳಿದ 8 ವಾಹನಗಳ ಮಾಲೀಕರು ಪತ್ತೆಯಾಗಬೇಕಿದೆ ಎಂದು ಪೊಲೀಸರು ವಿವರಿಸಿದ್ದಾರೆ.





