ಬೆಂಗಳೂರು | ನಿಲ್ಲಿಸಿದ್ದ ಕಾರುಗಳ ಗಾಜು ಒಡೆದು ಅಟ್ಟಹಾಸ: ಐವರು ಯುವಕರ ಬಂಧನ

ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು, ಸೆ.27: ನಿಲ್ಲಿಸಿದ್ದ ಕಾರುಗಳ ಗಾಜು ಒಡೆದು ಅಟ್ಟಹಾಸ ಮೆರೆದಿದ್ದ ಐವರು ಯುವಕನ್ನು ಇಲ್ಲಿನ ಬ್ಯಾಡರಹಳ್ಳಿ ಠಾಣಾ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ಆರೋಪಿಗಳಾದ ಲಿಖಿತ್, ಜಯಂತ್ ಸಹಿತ ಐವರನ್ನು ನೆಲಮಂಗಲ ಸಮೀಪದ ಸೊಂಡೆಕೊಪ್ಪದಲ್ಲಿ ಬಂಧಿಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಇತ್ತೀಚೆಗೆ ಬ್ಯಾಡರಹಳ್ಳಿಯ ವಾಲ್ಮೀಕಿನಗರ ಮತ್ತು ಮುದ್ದಯ್ಯನಪಾಳ್ಯದಲ್ಲಿ ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಕಾರುಗಳ ಗಾಜು ಒಡೆದಿದ್ದ ಆರೋಪಿಗಳು, ಆ ಬಳಿಕ ಮಾದನಾಯಕನಹಳ್ಳಿಯ ಮಾಗಡಿ ರೋಡ್ ವ್ಯಾಪ್ತಿಯಲ್ಲಿ ಚಾಲಕನೊಬ್ಬನ ಮೇಲೆ ಮಾರಕಾಸ್ತ್ರ ಬೀಸಿ ಮೊಬೈಲ್ ಹಾಗೂ 5 ಸಾವಿರ ರೂ. ಹಣ ದೋಚಿ ಪರಾರಿಯಾಗಿದ್ದರು.
ರೌಡಿಸಂನಲ್ಲಿ ಹೆಸರು ಮಾಡುವ ಸಲುವಾಗಿ ಆರೋಪಿಗಳು ದೊಡ್ಡಬಳ್ಳಾಪುರದ ಬಳಿ ಕೂಡ ಲಾಂಗ್ ಬೀಸಿ ಸಾರ್ವಜನಿಕರಿಗೆ, ವಾಹನ ಸವಾರರಿಗೆ ಬೆದರಿಕೆ ಹಾಕಿತ್ತಿದ್ದರು. ಸಿಕ್ಕ ಸಿಕ್ಕ ಲಾರಿಗಳನ್ನು ಅಡ್ಡಹಾಕಿ ಲಾಂಗ್ ತೋರಿಸಿ, ಬೆದರಿಸಿ ಹಣ ವಸೂಲಿ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಈ ಸಂಬಂಧ ಆರೋಪಿಗಳ ವಿರುದ್ಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ 16, ಎ.ಪಿ. ನಗರದಲ್ಲಿ 6, ಮಾದನಾಯಕನಹಳ್ಳಿಯಲ್ಲಿ 3, ದೊಡ್ಡಬಳ್ಳಾಪುರದಲ್ಲಿ 3 ಪ್ರಕರಣಗಳು ಸೇರಿ ಒಟ್ಟು 28 ಪ್ರಕರಣಗಳು ದಾಖಲಾಗಿದ್ದವು. ಸದ್ಯ ಈ ಕುರಿತು ತನಿಖೆ ಕೈಗೊಂಡಿದ್ದ ಬ್ಯಾಡರಹಳ್ಳಿ ಪೊಲೀಸರು ಸೊಂಡೆಕೊಪ್ಪದಲ್ಲಿ ಐವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಿರುವುದಾಗಿ ತಿಳಿಸಿದ್ದಾರೆ.







