ಬೆಂಗಳೂರಿನ ರಸ್ತೆಗಳನ್ನು ಸಂಚಾರ ಯೋಗ್ಯವಾಗಿಸಲು ತಿಂಗಳ ಕಾಲಾವಕಾಶ : ಅಧಿಕಾರಿಗಳಿಗೆ ಸಿಎಂ ನಿರ್ದೇಶನ

ಬೆಂಗಳೂರು, ಸೆ.27: ಮಳೆಗಾಲದಲ್ಲಿ ರಸ್ತೆ ಗುಂಡಿಗಳು ಹೆಚ್ಚಾಗಿದ್ದು, ತಿಂಗಳ ಒಳಗಾಗಿ ನಗರದಲ್ಲಿರುವ ಎಲ್ಲ ರಸ್ತೆ ಗುಂಡಿಗಳನ್ನು ಮುಚ್ಚಬೇಕು. ಆ ಮೂಲಕ ರಸ್ತೆಗಳನ್ನು ಸಂಚಾರ ಯೋಗ್ಯವಾಗಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ದ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಶನಿವಾರ ಬೆಂಗಳೂರು ನಗರ ರಸ್ತೆಗಳ ಪರಿಸ್ಥಿತಿ ಅರಿಯಲು ‘ಸಿಟಿ ರೌಂಡ್ಸ್’ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಸ್ತೆ ದುರಸ್ತಿ ಕಾರ್ಯ ಸರಿಯಿಲ್ಲದ ಕಾರಣ, ಸಂಬಂಧಪಟ್ಟ ಎಕ್ಸಿಕ್ಯೂಟಿವ್ ಇಂಜಿನಿಯರ್ ಅನ್ನು ಅಮಾನತ್ತುಗೊಳಿಸಲಾಗಿದೆ. ಗುಂಡಿ ಮುಚ್ಚಲು ಕೇವಲ ಜಲ್ಲಿ ಹಾಕಿ ಟಾರ್ ಹಾಕದೇ ಹಾಗೇ ಬಿಟ್ಟಿದ್ದ ಕಾರಣ, ಅವರ ಮೇಲೆ ಕ್ರಮ ಕೈಗೊಳ್ಳಲಾಗಿದೆ. ನಗರದ ರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಈ ಕಾರ್ಯ ಗುಣಮಟ್ಟದಿಂದ ಕೂಡಿರಬೇಕು ಎಂದು ನಿರ್ದೇಶನ ನೀಡಿದರು.
ಹೆಣ್ಣೂರು ರಸ್ತೆ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿದ್ದು, ರಸ್ತೆಯ ನಿರ್ವಹಣೆಯನ್ನು ಸಂಬಂಧಪಟ್ಟ ಗುತ್ತಿಗೆದಾರರ ಜವಾಬ್ದಾರಿಯಾಗಿರುತ್ತದೆ. 5 ಕಿ.ಮೀ. ರಸ್ತೆ ಕಾಮಗಾರಿಯನ್ನು ಕಿ.ಮೀ. ಒಂದಕ್ಕೆ 13 ಕೋಟಿ ರೂ.ಗಳನ್ನು ಸರಕಾರ ವ್ಯಯಿಸುತ್ತಿದೆ. ಈ ಕಾಮಗಾರಿಯನ್ನು ಪೂರ್ಣಗೊಳಿಸಲು ಒಂದು ತಿಂಗಳ ಕಾಲಾವಕಾಶವನ್ನು ನೀಡಲಾಗಿದೆ ಎಂದು ಸಿದ್ದರಾಮಯ್ಯ ವಿವರಿಸಿದರು.
ಬಳ್ಳಾರಿ ರಸ್ತೆಯ ವಿಂಡ್ಸರ್ ಮ್ಯಾನರ್ ಬಳಿ ರಸ್ತೆಯಲ್ಲಿ ನೀರು ನಿಲ್ಲದೆ ಸರಾಗವಾಗಿ ಹರಿದು ಒಳಚರಂಡಿ ಸೇರುವಂತೆ ವ್ಯವಸ್ಥೆ ಮಾಡಬೇಕು. ಹಾಗೆಯೇ ವಿಂಡ್ಸರ್ ಮ್ಯಾನರ್ ವೃತ್ತದಲ್ಲಿನ ರಸ್ತೆ ಕಾರ್ಯ ರಾತ್ರಿಯಲ್ಲಿ ಮುಗಿಸಬೇಕು. ಇನ್ನು ಮೆಟ್ರೋ ಕಾಮಗಾರಿ ನಡೆಯುವ ಸಂದರ್ಭಗಳಲ್ಲಿ ಮೆಟ್ರೋ ಸಿಬ್ಬಂದಿ ಸರ್ವೀಸ್ ರಸ್ತೆಗಳ ನಿರ್ಲಕ್ಷ್ಯ ಮಾಡಬಾರದು. ಹಾಳಾಗಿರುವ ವೈಟ್ ಟಾಪಿಂಗ್ ರಸ್ತೆಯನ್ನು ತಕ್ಷಣ ದುರಸ್ತಿ ಮಾಡಬೇಕು ಹಾಗೂ ಸರ್ವೀಸ್ ರಸ್ತೆಗಳ ನಿರ್ವಹಣೆ ಮಾಡಬೇಕು ಎಂದು ಅಧಿಕಾರಿಗಳು ಸೂಚನೆ ನೀಡಲಾಗಿದೆ ಎಂದರು.
ರಸ್ತೆಗಳ ಪಕ್ಕದಲ್ಲಿ ತ್ಯಾಜ್ಯವನ್ನು ನಿರ್ವಹಿಸದೇ ಹಾಗೇ ಬಿಟ್ಟಿದ್ದು, ತ್ಯಾಜ್ಯವನ್ನು ತ್ವರಿತವಾಗಿ ತೆಗೆಯಬೇಕು ಎಂದು ಸೂಚನೆ ನೀಡಲಾಗಿದೆ. ಇಲ್ಲವಾದಲ್ಲಿ ಸಂಬಂಧಪಟ್ಟ ಕಮೀಷನರ್ ಹಾಗೂ ಇಂಜಿನಿಯರ್ ಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು. ಹಾಗೆಯೇ ರಿಂಗ್ ರಸ್ತೆಯ ಬದಿಯಲ್ಲಿ ಸಿಸಿ ಕ್ಯಾಮರಾ ಇಲ್ಲದಿರುವ ಜಾಗದಲ್ಲಿ ಹಳೆ ಕಟ್ಟಡ ತ್ಯಾಜ್ಯ ಸುರಿಯುತ್ತಿದ್ದಾರೆ. ಈ ಜಾಗದಲ್ಲಿ ತ್ಯಾಜ್ಯ ಸುರಿದಿರುವವರನ್ನು ಪತ್ತೆ ಹಚ್ಚಿ, ಅವರ ವಾಹನ ಮುಟ್ಟುಗೋಲು ಹಾಕಿಕೊಂಡು ಪ್ರಕರಣ ದಾಖಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.
‘ನಗರದಲ್ಲಿ ರಸ್ತೆ ಗುಂಡಿಗಳಿರುವುದು ನಿಜ. ಆದರೆ, ಬಿಜೆಪಿ ಸರಕಾರದ ಅವಧಿಯಲ್ಲಿ ಈ ರಸ್ತೆ ಗುಂಡಿಗಳ ದುರಸ್ತಿ ನಡೆದಿದ್ದರೆ, ರಸ್ತೆಗಳು ಇಂತಹ ಪರಿಸ್ಥಿತಿಗೆ ತಲುಪುತ್ತಿರಲಿಲ್ಲ. ಮಳೆಗಾಲ ಮುಗಿಯುವುದರೊಳಗೆ ರಸ್ತೆ ಗುಂಡಿಗಳನ್ನು ಮುಚ್ಚಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು’
-ಸಿದ್ದರಾಮಯ್ಯ, ಮುಖ್ಯಮಂತ್ರಿ







