ಮಹಿಳೆಯ ಮೇಲೆ ದೌರ್ಜನ್ಯ ಪ್ರಕರಣ: ಮಾದನಾಯಕನಹಳ್ಳಿ ಠಾಣಾ ಇನ್ಸ್ಪೆಕ್ಟರ್ ವಿರುದ್ಧ ಕ್ರಮಕ್ಕೆ ಮಹಿಳಾ ಆಯೋಗ ಪತ್ರ

ಸಾಂದರ್ಭಿಕ ಚಿತ್ರ
ಬೆಂಗಳೂರು, ಸೆ.29: ಮಹಿಳೆಯ ಮೇಲೆ ದೌರ್ಜನ್ಯ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮಹಿಳಾ ಆಯೋಗವು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಸೋಮವಾರ ಪತ್ರ ಬರೆದಿದೆ.
ಅನ್ಯಾಯಕ್ಕೆ ಒಳಗಾದ ರೈತರ ಪರವಾಗಿ ಕರ್ನಾಟಕ ರಾಷ್ಟ್ರ ಸಮಿತಿ(ಕೆಆರ್ಎಸ್) ಪಕ್ಷದ ಕಾರ್ಯಕರ್ತರು ನ್ಯಾಯ ಕೇಳಲು ಮಾದನಾಯಕನಹಳ್ಳಿ ಪೊಲೀಸ್ ಠಾಣೆಗೆ ಹೋದಾಗ, ಅಲ್ಲಿ ಸುಳ್ಳು ಪ್ರಕರಣ ದಾಖಲಿಸಿ ರೈತರ ಬಂಧಿಸಿದ್ದನ್ನು ಪ್ರಶ್ನಿಸಲು ಮುಂದಾದಾಗ ನೆಲಮಂಗಲ ಠಾಣೆಯ ಇನ್ಸ್ಪೆಕ್ಟರ್ ನರೇಂದ್ರ ಬಾಬು ಎಂಬುವರು ಕೆಆರ್ ಎಸ್ ಕಾರ್ಯಕರ್ತರ ಮೊಬೈಲ್ ಕಸಿದುಕೊಂಡು ಬೆದರಿಕೆ ಹಾಕಿದ್ದಲ್ಲದೆ, ವೀಡಿಯೋ ಚಿತ್ರೀಕರಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವುದೂ ತಿಳಿದುಬಂದಿದೆ ಎಂದು ಪತ್ರದಲ್ಲಿ ಆಯೋಗ ಉಲ್ಲೇಖಿಸಿದೆ.
ಈ ನಡುವೆ, ಮಾದನಾಯಕನಹಳ್ಳಿ ಠಾಣೆಯ ಇನ್ಸ್ಪೆಕ್ಟರ್ ಒಬ್ಬ ಮಹಿಳೆಯೊಬ್ಬರ ಮೊಬೈಲ್ ಕಸಿದುಕೊಂಡು, ಸಾರ್ವಜನಿಕವಾಗಿ ನಡು ರಸ್ತೆಯಲ್ಲಿ ಅವಳನ್ನು ದರದರನೆ ಎಳೆದುಕೊಂಡು ಹೋಗಿ ದೌರ್ಜನ್ಯವೆಸಗಿರುವ ಅಮಾನುಷ ಕೃತ್ಯದ ಬಗ್ಗೆ ಮಾಧ್ಯಮದಲ್ಲಿ ವರದಿಯಾಗಿದೆ. ಆ ಮಹಿಳೆಯ ಮೇಲೆ ನಡೆದಿರುವ ದೌರ್ಜನ್ಯವನ್ನು ರಾಜ್ಯ ಮಹಿಳಾ ಆಯೋಗ ತೀವ್ರವಾಗಿ ಖಂಡಿಸುತ್ತದೆ. ಇದನ್ನು ಗಂಭೀರ ಘಟನೆ ಎಂದು ಪರಿಗಣಿಸಿ, ತಕ್ಷಣ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿಗೆ ಮಹಿಳಾ ಆಯೋಗ ಪತ್ರದಲ್ಲಿ ಕೋರಿದೆ.







