ಗ್ಯಾರಂಟಿ ಯೋಜನೆಗಳಿಂದ ಜನರ ಬದುಕಿನಲ್ಲಿ ಬೆಳಕು : ರಣದೀಪ್ ಸಿಂಗ್ ಸುರ್ಜೇವಾಲ

PC : PTI
ಬೆಂಗಳೂರು, ಅ. 2: ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳು ಕೇವಲ ಭರವಸೆಗಳಾಗಿ ಉಳಿಯದೆ, ಕೋಟ್ಯಂತರ ಜನರ ದೈನಂದಿನ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರುವಲ್ಲಿ ಯಶಸ್ವಿಯಾಗಿವೆ ಎಂದು ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ತಿಳಿಸಿದ್ದಾರೆ.
ಗುರುವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ‘ಗೃಹಲಕ್ಷ್ಮಿ ಮತ್ತು ‘ಶಕ್ತಿ’ ಯೋಜನೆಗಳು ಮಹಿಳೆಯರ ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣಕ್ಕೆ ಪ್ರಮುಖ ಸಾಧನಗಳಾಗಿ ಹೊರಹೊಮ್ಮಿವೆ. ಉದಾಹರಣೆಗೆ, ರಾಮನಗರದ ಫಲಾನುಭವಿ ಬಿ.ಕೆ.ತುಳಸಿ ಎಂಬುವವರು ಆಯುಧಪೂಜೆ ದಿನ ಗೃಹಲಕ್ಷ್ಮಿ ಹಣದಿಂದ 13ಸಾವಿರ ರೂ.ಮೌಲ್ಯದ ವಾಷಿಂಗ್ ಮಿಷನ್ ಖರೀದಿಸುವ ಮೂಲಕ ಯೋಜನೆಯ ಸದ್ಬಳಕೆಯನ್ನು ಮಾಡಿರುವುದು ಈ ಕ್ರಾಂತಿಗೆ ಒಂದು ಜೀವಂತ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.
ಮನೆಯ ಯಜಮಾನಿಯ ಖಾತೆಗೆ ಮಾಸಿಕವಾಗಿ ಹಣ ಜಮಾವಣೆಯಾಗುವ ಗೃಹಲಕ್ಷ್ಮಿ ಯೋಜನೆಯು, ಮಹಿಳೆಯರ ಖರೀದಿ ಸಾಮಥ್ರ್ಯವನ್ನು ಹೆಚ್ಚಿಸಿ, ಸಣ್ಣ ಉಳಿತಾಯಕ್ಕೆ ದಾರಿ ಮಾಡಿಕೊಟ್ಟಿದೆ. ಈ ಹಣ ಕೇವಲ ಖರ್ಚುಗಳಿಗೆ ಸೀಮಿತವಾಗಿಲ್ಲ, ಬದಲಿಗೆ ಉತ್ಪಾದಕ ಆಸ್ತಿಗಳನ್ನು ಸೃಷ್ಟಿಸಲು ನೆರವಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಈ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ತುಳಸಿ, ‘ನಮಗೆ ಈ ಹಣ ಬಂದಿದ್ದು ಖುಷಿಯಾಗಿದೆ. ನಾವು ಅಕ್ಕಪಕ್ಕ ವಿಚಾರಿಸಿದಾಗ, ಎಲ್ಲರೂ ಹಬ್ಬ-ಹರಿದಿನಗಳಲ್ಲಿ ಬಟ್ಟೆ ಮತ್ತಿತರ ಅಗತ್ಯ ವಸ್ತುಗಳನ್ನು ಖರೀದಿಸಿ ಸಂತೋಷಪಟ್ಟಿದ್ದಾರೆ. ಈ ಯೋಜನೆ ಎಲ್ಲರಿಗೂ ಒಳ್ಳೆಯದಾಗಿದ್ದು, ಇದನ್ನು ಯಾವುದೇ ಕಾರಣಕ್ಕೂ ನಿಲ್ಲಿಸದೆ ಮುಂದುವರಿಸಬೇಕು’ ಎಂದು ತಿಳಿಸಿದ್ದಾರೆ.
‘ಇದು ಗ್ರಾಮೀಣ ಭಾಗದ ಸೇರಿದಂತೆ ಎಲ್ಲ ಮಹಿಳೆಯರಿಗೂ ಅನುಕೂಲವನ್ನು ಮಾಡಿಕೊಟ್ಟಿದೆ ಎಂದಿದ್ದಾರೆ. ಹೀಗಾಗಿ ಗೃಹಲಕ್ಷ್ಮಿ ಯೋಜನೆಯು ಮಹಿಳೆಯರಿಗೆ ತಮ್ಮ ಕುಟುಂಬದ ನಿರ್ಧಾರಗಳಲ್ಲಿ ಸ್ವಾತಂತ್ರ್ಯ ಮತ್ತು ಆರ್ಥಿಕ ಭದ್ರತೆಯನ್ನು ನೀಡಿದೆ ಎಂಬುದಕ್ಕೆ ತುಳಸಿ ಅವರ ಮಾತು ಸಾಕ್ಷಿಯಾಗಿದೆ ಎಂದು ತಿಳಿಸಿದ್ದಾರೆ.
ದೇಶವೇ ಮೆಚ್ಚಿದ ‘ಶಕ್ತಿ ಯೋಜನೆ’: ಮಹಿಳಾ ಸಬಲೀಕರಣದೆಡೆಗಿನ ಸರಕಾರದ ಮತ್ತೊಂದು ಮಹತ್ವಾಕಾಂಕ್ಷೆಯ ಯೋಜನೆಯಾದ ಶಕ್ತಿ ಯೋಜನೆಯು, ಮಹಿಳೆಯರಿಗೆ ಸರಕಾರಿ ಬಸ್ಗಳಲ್ಲಿ ಉಚಿತ ಪ್ರಯಾಣದ ಅವಕಾಶ ಕಲ್ಪಿಸಿದೆ. ಇದರಿಂದಾಗಿ ಮಹಿಳೆಯರು ಆರ್ಥಿಕ, ಸಾಮಾಜಿಕ ಹಾಗೂ ಔದ್ಯೋಗಿಕವಾಗಿ ಹೆಚ್ಚು ಸಬಲರಾಗಲು ಸಾಧ್ಯವಾಗಿದೆ. ಶಕ್ತಿ ಯೋಜನೆಯ ಯಶಸ್ಸು ಇದೀಗ ವಿಶ್ವ ಮಟ್ಟದಲ್ಲಿ ದಾಖಲಾಗಿದೆ ಎಂದು ಅವರು ಬಣ್ಣಿಸಿದ್ದಾರೆ.







