ಗಾಂಧೀಜಿ ಆದರ್ಶ-ತತ್ವಗಳನ್ನು ಪ್ರತಿಯೊಬ್ಬರು ಪಾಲಿಸಬೇಕು : ಜಿಲ್ಲಾಧಿಕಾರಿ ಜಗದೀಶ್

ಬೆಂಗಳೂರು, ಅ. 2: ಇಂದಿನ ಆಧುನಿಕತೆಯಲ್ಲಿ ನಾವುಗಳು ಸಾಮಾಜಿಕ ಜಾಲತಾಣಗಳಲ್ಲಿ ಬರುವಂತಹ ಸುಳ್ಳು ಸುದ್ದಿಗಳನ್ನು ಹೆಚ್ಚಾಗಿ ನಂಬುತ್ತಿದ್ದೇವೆ. ಇದರಿಂದ ಹೊರಬಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಆದರ್ಶ, ತತ್ವಗಳನ್ನು ಪಾಲಿಸಬೇಕು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ ಜಿ. ಅವರು ಸಲಹೆ ನೀಡಿದ್ದಾರೆ.
ಗುರುವಾರ ಇಲ್ಲಿನ ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮಹಾತ್ಮಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ಗಾಂಧೀಜಿಯವರು ದೇಶಕ್ಕಾಗಿ ನೀಡಿರುವ ಕೊಡುಗೆಯ ಬಗ್ಗೆ ಇಂದಿನ ಯುವ ಪೀಳಿಗೆಯಲ್ಲಿ ಅರಿವು ಮೂಡಿಸಲು ಸರಕಾರ ವಿವಿಧ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಂಡಿದೆ ಎಂದರು.
ಬಾಪೂಜಿ ಪ್ರಬಂಧ ಸ್ಪರ್ಧೆಯನ್ನು ಶಾಲಾ ಕಾಲೇಜು ಮಕ್ಕಳಿಗಾಗಿ ಏರ್ಪಡಿಸಿದ್ದು, ಅದರಲ್ಲಿ ಭಾಗವಹಿಸಿ ಬಹುಮಾನ ಗೆದ್ದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು. ಗಾಂಧೀಜಿ ಅವರ ತತ್ವಗಳನ್ನು ಆಚರಣೆ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ. ಆದರೆ, ಪ್ರಯತ್ನ ಪಡುವುದು ಮುಖ್ಯ. ಸರಕಾರವು ಇಂತಹ ಮಹಾನಿಯರ ಜಯಂತಿಯ ಸಂದರ್ಭದಲ್ಲಿ ಪ್ರಬಂಧ ಸ್ಪರ್ಧೆ ಆಯೋಜಿಸುವ ಮೂಲಕ ಗಾಂಧಿ ತತ್ವವನ್ನು ಪ್ರತಿ ಶಾಲೆಗೆ ಮುಟ್ಟಿಸಿದೆ ಎಂದರು.
ಅದೇ ರೀತಿ ಅಂಬೇಡ್ಕರ್ ಹಾಗೂ ಬಸವಣ್ಣನವರ ಜಯಂತಿ ಆಚರಿಸುವ ಸಂದರ್ಭದಲ್ಲಿ ಪ್ರಬಂಧ ಸ್ಪರ್ಧೆ ಹಾಗೂ ಭಾಷಣ ಸ್ಪರ್ಧೆಯನ್ನು ಆಯೋಜಿಸಿ ಅವರ ಆದರ್ಶ-ತತ್ವಗಳು ಮಕ್ಕಳಿಗೆ ಮುಟ್ಟುವಂತೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಈ ರೀತಿ ಹೆಚ್ಚು ಹೆಚ್ಚು ಕಾರ್ಯಕ್ರಮ ಮಾಡುವುದರಿಂದ ಮಕ್ಕಳಲ್ಲಿ ಒಳ್ಳೆಯ ವ್ಯಕ್ತಿತ್ವವನ್ನು ರೂಪಿಸಲು ಸಾಧ್ಯವಾಗುತ್ತದೆ ಎಂದು ಅವರು ನುಡಿದರು.
ಇಂತಹ ಚಟುವಟಿಕೆಗಳಿಂದ ಮಕ್ಕಳು ಗಾಂಧೀಜಿಯವರ ತತ್ವ ಹಾಗೂ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಪ್ರತಿಯೊಬ್ಬರು ಗಾಂಧೀಜಿಯವರ ಆತ್ಮಚರಿತ್ರೆ ಒಮ್ಮೆ ಓದಲೇಬೇಕು. ಗಾಂಧೀಜಿ ಹಾಕಿ ಕೊಟ್ಟ ಅಹಿಂಸಾ ಮಾರ್ಗ ಹಾಗೂ ಅವರ ಸರಳ ಜೀವನ ಶೈಲಿಯು ಇಂದಿನ ಯುವಕರಿಗೆ ಸ್ಫೂರ್ತಿದಾಯಕವಾಗಿದೆ ಎಂದು ಅವರು ಸ್ಮರಿಸಿದರು.
ಗಾಂಧೀಜಿಯಂತಹ ಅದ್ಭುತ ವ್ಯಕ್ತಿ ನಮ್ಮ ಭಾರತದಲ್ಲಿ ಹುಟ್ಟಿರುವುದು ನಮ್ಮ ಹೆಮ್ಮೆ. ಗಾಂಧೀಜಿಯವರು ಇಡೀ ಪ್ರಪಂಚಕ್ಕೆ ಬೆಳಕಾದವರು ಸತ್ಯ, ಅಹಿಂಸೆ, ಸತ್ಯಾಗ್ರಹದಂತಹ ತತ್ವಗಳು ಈಗಲೂ ಇಡೀ ಪ್ರಪಂಚಕ್ಕೆ ದಾರಿದೀಪವಾಗಿದೆ. ಎಲ್ಲ ಶಸ್ತ್ರ ಹೋರಾಟಗಳು ವಿಫಲವಾದಂತಹ ಸಂದರ್ಭದಲ್ಲಿ ಸತ್ಯಾಗ್ರಹದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡಬಹುದು ಎಂದು ಪ್ರಪಂಚಕ್ಕೆ ತೋರಿಸಿಕೊಟ್ಟಂತಹ ಮಹಾನ್ ವ್ಯಕ್ತಿ ಗಾಂಧಿ ಎಂದು ಅವರು ಸ್ಮರಿಸಿದರು.
ಜಿ.ಪಂ. ಸಿಇಓ ಯತೀಶ್ ಆರ್. ಮಾತನಾಡಿ, ಸರಳವಾಗಿ ಬದುಕಿದ, ಬೇರೊಬ್ಬರಿಗೆ ನೋವು ಕೊಡದಂತೆ ಜೀವನ ನಡೆಸಿದ ಗಾಂಧೀಜಿಯವರು ಬದುಕು ನಮಗೆ ದಾರಿದೀಪ, ಅವರಲ್ಲಿದ್ದ ವಿಶಾಲ ಮನೋಭಾವವನ್ನು ನಾವು ಬೆಳೆಸಿಕೊಳ್ಳಬೇಕು. ಅವರ ಜೀವನ ಚರಿತ್ರೆಯೇ ನಮಗೆ ಮಾರ್ಗದರ್ಶಕ, ಅವರು ದೇಶಕ್ಕೆ ನೀಡಿದ ಕೊಡುಗೆಗಳನ್ನು ಸದಾ ನೆನಪಿನಲ್ಲಿಟ್ಟುಕೊಂಡು ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಇದೇ ವೇಳೆ ವಾರ್ತಾ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ಪ್ರೌಢಶಾಲೆ ವಿಭಾಗದ ಸೃಜನಾ-ಸರಕಾರಿ ಪ್ರೌಢಶಾಲೆ, ಚಿಕ್ಕಬಾಣಾವಾರ(ಪ್ರಥಮ), ಸ್ನೇಹ ಎಂ. ಸರಕಾರಿ ಪ್ರೌಡಶಾಲೆ, ಛತ್ರಖಾನೆ ಚಂದಾಪುರ, ಆನೇಕಲ್ ತಾಲೂಕು(ದ್ವಿತೀಯ), ಇಂಪನಾ ಎಂ. ಬಿ.ಎನ್.ಆರ್.ಪಬ್ಲಿಕ್ ಸ್ಕೂಲ್, ಟಿ.ದಾಸರಹಳ್ಳಿ (ತೃತೀಯ).
ಪದವಿ ಪೂರ್ವ ವಿಭಾಗ: ರಕ್ಷಿತ ಸಿದ್ದಪ್ಪ ವಗ್ಗರ್ ಸರಕಾರಿ ಪದವಿ ಪೂರ್ವ ಕಾಲೇಜು, ಆನೇಕಲ್ (ಪ್ರಥಮ), ಐಶ್ವರ್ಯ ನಾಗಾರ್ಜುನ ಪದವಿ ಪೂರ್ವ ಕಾಲೇಜು(ದ್ವಿತೀಯ) ಹಾಗೂ ಶೋಭ ಟೋಕಪುರ ಸರ್.ಎಂ.ವಿಶ್ವೇಶ್ವರಯ್ಯ ಪದವಿ ಪೂರ್ವ ಕಾಲೇಜು, ಎಚ್.ಎ.ಎಲ್ ರಸ್ತೆ,(ತೃತೀಯ).
ಪದವಿ/ಸ್ನಾತಕೋತ್ತರ ವಿಭಾಗ: ಶ್ರೀಶಗೌಡ ಎನ್.ಎಚ್-ಬಿಎಸ್‍ಸಿ ವಿಭಾಗ, 5ನೆ ಸೆಮಿಸ್ಟರ್, ಸರಕಾರಿ ಪ್ರಥಮ ದರ್ಜೆ ಕಾಲೇಜು, ಕೆ.ಆರ್.ಪುರಂ(ಪ್ರಥಮ), ಮನು ಬಿ.ಎನ್. ಬಿಸಿಎ ವಿಭಾಗ, 1ನೆ ಸೆಮಿಸ್ಟರ್, ಸರಕಾರಿ ಪ್ರಥಮ ದರ್ಜೆ ಕಾಲೇಜು, ಬಸವನಗುಡಿ (ದ್ವಿತೀಯ) ಹಾಗೂ ನಾಗರಾಜ ಬಿ.ಎ. ವಿಭಾಗ 5ನೆ ಸೆಮಿಸ್ಟರ್ ಬೆಂಗಳೂರು ವಿವಿ ಜ್ಞಾನಭಾರತಿ(ತೃತೀಯ) ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ನಗದು ಬಹುಮಾನ ವಿತರಿಸಲಾಯಿತು.
ಈ ವೇಳೆ ವಾರ್ತಾ ಇಲಾಖೆಯ ಉಪನಿರ್ದೇಶಕಿ ಪಲ್ಲವಿ ಹೊನ್ನಾಪುರ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಲಕ್ಷ್ಮಣ ರೆಡ್ಡಿ ಸೇರಿದಂತೆ ಇತರೆ ಇಲಾಖೆಯ ಅಧಿಕಾರಿಗಳು, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.







