ಎಲ್ಲ ಭಾಗ್ಯಗಳನ್ನು ಹಿಂಪಡೆಯಲು ಸಿದ್ಧತೆ : ಡಾ.ಅಶ್ವತ್ಥ ನಾರಾಯಣ್ ಆರೋಪ

ಬೆಂಗಳೂರು, ಅ. 4: ರಾಜ್ಯ ಸರಕಾರ ಎಲ್ಲ ಭಾಗ್ಯಗಳನ್ನು ಹಿಂಪಡೆದು ನಾಮ ಹಾಕಲು ಸಿದ್ಧವಾಗಿದೆ. ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಮ್ಮ ದೌರ್ಭಾಗ್ಯ ಆಗಲಿದೆ. ಸಮೀಕ್ಷೆ ಮೂಲಕ ಸರಕಾರ ಜನಕಲ್ಯಾಣ ಯೋಜನೆಗಳನ್ನು ಹಿಂಪಡೆಯಲು ಹುನ್ನಾರ ನಡೆಸಿದೆ ಎಂದು ಮಾಜಿ ಡಿಸಿಎಂ ಡಾ.ಅಶ್ವತ್ಥ ನಾರಾಯಣ್ ಆರೋಪಿಸಿದರು.
ಶನಿವಾರ ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‍ನವರಿಗೆ ಏನು ಕೊಟ್ಟರೂ ತೃಪ್ತಿ ಇಲ್ಲ, ಯಾರೂ ಸಮಾಧಾನದಿಂದ ನೆಮ್ಮದಿಯಿಂದ ಬಾಳಬಾರದು ಎಂಬುದೇ ಅವರ ಉದ್ದೇಶ. ಕೇಂದ್ರ ಸರಕಾರ ಜಾತಿ ಗಣತಿ ಮಾಡುತ್ತದೆಯಲ್ಲವೇ? ಜಾತಿ ಗಣತಿ ಮಾಡಲು ರಾಜ್ಯ ಸರಕಾರಕ್ಕೆ ಅಧಿಕಾರ ಇದೆಯೇ? ಎಂದು ಪ್ರಶ್ನಿಸಿದರು.
ಸಮೀಕ್ಷೆ ಇದು ಕಡ್ಡಾಯವಲ್ಲ ಎಂದು ಹೈಕೋರ್ಟ್ ತಿಳಿಸಿದೆ. ಇದು ಪರಿಪೂರ್ಣ ಗಣತಿ ಆಗಲು ಸಾಧ್ಯವೇ?. ಸಮಾಜ ಒಡೆಯುವವರು, ದೇಶ ಒಡೆಯುವ ಕೆಲಸವನ್ನು ಅಥವಾ ತುಷ್ಟೀಕರಣ ರಾಜಕೀಯ, ಜಾತಿ-ಜಾತಿಗಳ ನಡುವೆ ಎತ್ತಿ ಕಟ್ಟುವ ಕೆಲಸ, ಭಾಷೆಗಳ ಮೇಲೆ ಎತ್ತಿ ಕಟ್ಟುವವರು ಇದ್ದಾರೆ. ಒಂದೆಡೆ ವಿವಿಧತೆಯಲ್ಲಿ ಏಕತೆ ಎನ್ನುತ್ತಾರೆ. ಇನ್ನೊಂದೆಡೆ ವಿವಿಧತೆಯಲ್ಲಿ ವಿವಿಧತೆ ಮಾಡುವವರಿದ್ದಾರೆ ಎಂದು ಅವರು ಆಕ್ಷೇಪಿಸಿದರು.





