ಬೆಂಗಳೂರು | ಸಮೀಕ್ಷೆಗೆ ನಿಯೋಜನೆಗೊಂಡ ಗಣತಿದಾರರಿಂದ ಪ್ರತಿಭಟನೆ

ಬೆಂಗಳೂರು, ಅ.4: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ನಡೆಸಲು ನಿಯೋಜನೆ ಮಾಡಿರುವುದನ್ನು ಖಂಡಿಸಿ, ನೂರಾರು ಗಣತಿದಾರರು ಇಲ್ಲಿನ ಮಲ್ಲೇಶ್ವರದ ನಗರಸಭೆ ಕಚೇರಿ ಎದುರು ಧರಣಿ ನಡೆಸಿದರು.
ವಾರ್ಡ್‍ಗಳ ಹಂಚಿಕೆಯಲ್ಲಿ ಗೊಂದಲ ಉಂಟಾಗಿದೆ. ಸ್ಥಳೀಯವಾಗಿ ಹತ್ತು ವಾರ್ಡ್‍ಗಳ ಆಯ್ಕೆಗೆ ಅವಕಾಶ ಇದ್ದರೂ, ಆದರೆ ಗಣತಿದಾರರು ಆಯ್ಕೆ ಮಾಡಿದ ವಾರ್ಡ್‍ಗಳನ್ನು ಬಿಟ್ಟು ದೂರ ದೂರದ ವಾರ್ಡ್‍ಗಳಿಗೆ ಹಂಚಿಕೆ ಮಾಡಲಾಗಿದೆ. ವಿಕಲಚೇತನರಿಗೆ, ಚಿಕ್ಕ ಮಕ್ಕಳಿರುವ ತಾಯಂದಿರು, ಗರ್ಭಿಣಿಯರಿಗೆ ದೂರದ ವಾರ್ಡ್‍ಗಳ ಹಂಚಿಕೆಯಿಂದ ಸಮಸ್ಯೆಯಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯವರಿಗೆ ನಗರದೊಳಗೆ ಗಣತಿಗೆ ನಿಯೋಜನೆ ಮಾಡಿದ್ದು, 20 ಕಿ.ಮೀ. ಯಿಂದ 40 ಕಿ.ಮೀ ದೂರ ಬರಬೇಕಾದ ಅನಿವಾರ್ಯತೆ ಉಂಟಾಗಿದೆ. ಹೃದ್ರೋಗ ಸೇರಿ ಕೆಲ ರೋಗಗಳಿಂದ ನರಳುತ್ತಿರುವ ಸರಕಾರಿ ನೌಕರರಿಗೂ ಗಣತಿಗೆ ನೇಮಕ ಮಾಡಿದ್ದಾರೆ. ಗಣತಿಯಿಂದ ವಿನಾಯಿತಿ ಕೊಡುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ದಾರೆ.
ಹಲವು ವಿಕಲಚೇತನರು ಗಣತಿಯಿಂದ ವಿನಾಯಿತಿ ಕೋರಿದ್ದಾರೆ. ಆದರೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಸಮೀಕ್ಷೆಯ ತಂತ್ರಾಂಶದ ಗೊಂದಲ, ತಾಂತ್ರಿಕ ಸಮಸ್ಯೆ ನಿವಾರಣೆ ಆಗಿಲ್ಲ. ಆದರೂ ಪ್ರತಿ ಗಣತಿದಾರರಿಗೆ ಒಟ್ಟು 300 ಮನೆಗಳ ಗಣತಿಗೆ ಸೂಚನೆ ನೀಡಲಾಗಿದೆ. ಆದರೆ ಒಂದು ಮನೆಯ ಸಮೀಕ್ಷೆಗೆ ಕನಿಷ್ಟ ಅರ್ಧ ಗಂಟೆಯಿಂದ ಒಂದು ಗಂಟೆ ಕಾಲ ಬೇಕು. ಹೀಗಾಗಿ ನಿಗದಿತ ಅವಧಿಯಲ್ಲಿ ಹೇಗೆ ಸಮೀಕ್ಷೆಯನ್ನು ಪೂರ್ಣ ಗೊಳಿಸಲು ಸಾಧ್ಯ ಎಂದು ಗಣತಿದಾರರು ಪ್ರಶ್ನಿಸಿದ್ದಾರೆ.
ಇದೇ ವೇಳೆ ಮಹಿಳೆಯೊಬ್ಬರು ತನ್ನ ಮಗುವನ್ನು ಪ್ರತಿಭಟನಾ ಸ್ಥಳಕ್ಕೆ ಕರೆತಂದು, ಏಕೆ ಸಮೀಕ್ಷೆ ಕಾರ್ಯದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ ಎಂಬುದನ್ನು ತೋರಿಸಿದರು.







