ವೀರಶೈವ-ಲಿಂಗಾಯತರು ಕೆಟ್ಟರೆ ರಾಜ್ಯವೇ ಕೆಡುತ್ತದೆ: ಈಶ್ವರ ಖಂಡ್ರೆ

ಬೆಂಗಳೂರು, ಅ.6: ವೀರಶೈವ -ಲಿಂಗಾಯತರನ್ನು ಬೇರೆ ಮಾಡಲು ಯಾವುದೇ ಶಕ್ತಿಗೂ ಸಾಧ್ಯವಿಲ್ಲ. ಇಬ್ಬರೂ ಒಂದೇ ಎಂದು ಪರಮಪೂಜ್ಯ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿ ಅವರೇ ಪ್ರತಿಪಾದಿಸಿದ್ದಾರೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದ್ದಾರೆ.
ವಿಧಾನಸೌಧದಲ್ಲಿಂದು ಸುದ್ದಿಗಾರೊಂದಿಗೆ ಮಾತನಾಡಿದ ಅವರು, ವೀರಶೈವ-ಲಿಂಗಾಯತರು ಸುಧಾರಿಸಿದರೆ ರಾಜ್ಯ ಸುಧಾರಿಸುತ್ತದೆ, ವೀರಶೈವ ಲಿಂಗಾಯತರು ಕೆಟ್ಟರೆ ಇಡೀ ರಾಜ್ಯವೇ ಹಾಳಾಗುತ್ತದೆ ಎಂಬ ಜನಜನಿತ ಹೇಳಿಕೆ ಇದೆ. ನಮ್ಮ ಸಮುದಾಯದ ಒಗ್ಗಟ್ಟಿನಲ್ಲಿ ಬಲವಿದೆ. ವಿಘಟನೆಯಲ್ಲಿ ಸೋಲಿದೆ ಎಂದು ಪ್ರತಿಪಾದಿಸಿದರು.
ನಾವೆಲ್ಲರೂ ಭೌಗೋಳಿಕವಾಗಿ ಹಿಂದೂಗಳೇ ಆದರೂ, ನಮ್ಮ ಆಚಾರ-ವಿಚಾರವನ್ನು ಗೌರವಿಸಿ ಸಿಖ್, ಪಾರ್ಸಿ, ಜೈನರಿಗೆ ನೀಡಿರುವಂತೆ ಪ್ರತ್ಯೇಕ ಧರ್ಮದ ಮಾನ್ಯತೆಯನ್ನು ವೀರಶೈವ-ಲಿಂಗಾಯತ ಧರ್ಮಕ್ಕೆ ನೀಡಬೇಕು ಎಂದು ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಸ್ವಾತಂತ್ರ್ಯಪೂರ್ವದಿಂದ ವಿಶೇಷವಾಗಿ 2000 ಇಸವಿಯಲ್ಲಿ ನಡೆದ ಜನಗಣತಿಯಿಂದಲೂ ಪ್ರತಿಪಾದಿಸುತ್ತಾ ಬಂದಿದೆ. ಜಾತಿಗಣತಿಯಲ್ಲಿ ನಮ್ಮ ಧರ್ಮಕ್ಕೆ ಪ್ರತ್ಯೇಕ ಕಾಲಂ ನೀಡಲು ಒತ್ತಾಯಿಸುತ್ತೇವೆ ಎಂದರು.
ವೀರಶೈವ-ಲಿಂಗಾಯತ ಸಮಾನಾರ್ಥಕ ಪದಗಳು. ಇಷ್ಟಲಿಂಗ ಪೂಜೆ ಮಾಡುವವರು ಮತ್ತು ಅಷ್ಟಾವರ್ಣ ಪಂಚಾಚಾರ ಷಟಸ್ಥಳ ಆಚರಣೆ ಮಾಡುವ ಗುರುಗಳು ಮತ್ತು ವಿರಕ್ತರೂ ಇದ್ದಾರೆ. ಹೀಗಾಗಿ ವೀರಶೈವರು ಮತ್ತು ಲಿಂಗಾಯತರು ಒಟ್ಟಿಗೆ ಇರಬೇಕು ಎಂಬುದು ಸಭಾದ ಸ್ಪಷ್ಟ ನಿಲುವಾಗಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.
ಪ್ರತ್ಯೇಕ ಧರ್ಮದ ವಿಚಾರಕ್ಕೂ ಸರಕಾರಕ್ಕೂ ಯಾವುದೇ ಸಂಬಂಧವಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜನ ಸಮುದಾಯದ ನಾಯಕರಾಗಿದ್ದಾರೆ. ಕೆಲವರು ರಾಜಕೀಯ ದುರುದ್ದೇಶದಿಂದ ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.
ಬಸವಾದಿ ಶರಣರು ಸಮಸಮಾಜದ ಭವ್ಯ ಕನಸು ಕಂಡಿದ್ದರು. ಅದನ್ನೇ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲಿಸುತ್ತಿದ್ದಾರೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಕೊಡಿಸಲು ಶ್ರಮಿಸುತ್ತಿದ್ದಾರೆ. ಬುದ್ಧ, ಬಸವ, ಅಂಬೇಡ್ಕರ್ ಸಿದ್ಧಾಂತವನ್ನು ಅವರು ಗೌರವಿಸುತ್ತಾರೆ. ಬಸವ ತತ್ವ ಸಾರ್ವಕಾಲಿಕ ಸತ್ಯವಾಗಿದೆ. ಹಿಂದೆ, ಇಂದು ಮತ್ತು ಮುಂದೆಯೂ ಇದು ಜಗತ್ತಿಗೆ ಮಾರ್ಗದರ್ಶನ ಮಾಡುತ್ತದೆ ಎಂದರು.
ನವೆಂಬರ್ ಕ್ರಾಂತಿ ಮಾಧ್ಯಮಗಳ ಚರ್ಚೆಯ ವಸ್ತು ಅಷ್ಟೇ. ಪಕ್ಷದ ಹಂತದಲ್ಲಿ ಈ ಚರ್ಚೆ ನಡೆದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಈಶ್ವರ ಖಂಡ್ರೆ ಉತ್ತರಿಸಿದರು.







