ಮುಖ್ಯ ನ್ಯಾಯಾಧೀಶರ ಮೇಲೆ ಶೂ ಎಸೆತ ಪ್ರಕರಣ | ಮನುವಾದದ ಬೆಂಬಲಿಗರ ಷಡ್ಯಂತ್ರ: ರಮೇಶ್ ಬಾಬು

ಬೆಂಗಳೂರು, ಅ.8: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರ ಮೇಲೆ ಶೂ ಎಸೆದಿರುವುದು ಮನುವಾದದ ಬೆಂಬಲಿಗರ ಷಡ್ಯಂತ್ರದ ಭಾಗವಾಗಿದ್ದು, ಇದರ ಹಿಂದಿರುವ ಕೈಗಳು ಹೊರಬರಬೇಕು. ಅದಕ್ಕಾಗಿ ಉನ್ನತ ಮಟ್ಟದ ತನಿಖೆಯಾಗಬೇಕು. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ರಮೇಶ್ ಬಾಬು ತಿಳಿಸಿದ್ದಾರೆ.
ಬುಧವಾರ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಶೂ ಎಸೆತ ಸಣ್ಣ ಪ್ರಮಾಣದ ಕೃತ್ಯವಲ್ಲ. ಇದರ ಹಿಂದಿರುವ ಕುತಂತ್ರ ಬಹಿರಂಗ ಆಗಬೇಕಾದರೆ, ಉನ್ನತ ಮಟ್ಟದ ನ್ಯಾಯಾಂಗ ತನಿಖೆಯಾಗಬೇಕು. ದಲಿತರ ಮೇಲೆ ಆಗುತ್ತಿರುವ ದೌರ್ಜನ್ಯಕ್ಕೆ ಬಿಜೆಪಿ ಮನಸ್ಥಿತಿ ಕಾರಣವಾಗಿದ್ದು, ಹಿಂದುಳಿದ ವರ್ಗಗಳ, ದಲಿತರ ನಾಯಕರು, ಅಧಿಕಾರಿಗಳನ್ನು ಗುರಿ ಮಾಡಿ ಟೀಕೆ ಮಾಡಲಾಗುತ್ತಿದೆ ಎಂದು ಖಂಡಿಸಿದರು.
ದೇಶದ ಇತಿಹಾಸದಲ್ಲಿ ಇಬ್ಬರು ದಲಿತರು ಮಾತ್ರ ಮುಖ್ಯನ್ಯಾಯಧೀಶರಾಗಿ ಕೆಲಸ ಮಾಡಿದ್ದಾರೆ. ಮೊದಲನೆಯದಾಗಿ ಜಸ್ಟೀಸ್ ಬಾಲಕೃಷ್ಣ ಅವರು ಎರಡನೇ ವ್ಯಕ್ತಿಯಾಗಿ ಗವಾಯಿ ಅವರು. ಇಂತಹ ಉನ್ನತ ಸ್ಥಾನಕ್ಕೆ ದಲಿತರು ಹೋಗಿದ್ದಾರೆ ಎಂಬುದನ್ನು ಬಿಜೆಪಿಗೆ ಸಹಿಸಲು ಆಗುತ್ತಿಲ್ಲ. ಇದರ ವಿರುದ್ದ ಬಿಜೆಪಿ ಕೆಲಸ ಮಾಡುತ್ತಿದೆ. ದೇಶದ ಪ್ರಧಾನ ಮಂತ್ರಿಗಳು ಇಡೀ ದೇಶದಲ್ಲಿ ಯಾವುದೇ ಸಣ್ಣ ಘಟನೆಯಾದರೂ ಪ್ರಚಾರದ ಉದ್ದೇಶಕ್ಕಾದರೂ ಟ್ವೀಟ್ ಮಾಡುತ್ತಾರೆ. ಆದರೆ ಶೂ ಎಸೆತ ಘಟನೆಯಾದ ಆರು ಗಂಟೆಗಳ ನಂತರ ಪ್ರತಿಕ್ರಿಯೆ ನೀಡಿದ್ದಾರೆ. ಅಂದರೆ ಘಟನೆಯಲ್ಲಿ ಅವರ ಪಾತ್ರವೂ ಇದೆಯೇ ಎನ್ನುವ ಅನುಮಾನ ಮೂಡುತ್ತಿದೆ ಎಂದು ಅವರು ಹೇಳಿದರು.







