ಬೆಂಗಳೂರು | ಸಿಜೆಐಗೆ ಶೂ ಎಸೆದ ಕೃತ್ಯ ಖಂಡಿಸಿ ವಕೀಲರ ಸಂಘದಿಂದ ಪ್ರತಿಭಟನೆ

ಬೆಂಗಳೂರು, ಅ.8: ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರತ್ತ ವಕೀಲ ರಾಕೇಶ್ ಕಿಶೋರ್ ಶೂ ಎಸೆದ ಕೃತ್ಯವನ್ನು ಖಂಡಿಸಿ ಬೆಂಗಳೂರು ವಕೀಲರ ಸಂಘ ಬುಧವಾರ ಹೈಕೋರ್ಟ್‌ನ 'ಗೋಲ್ಡನ್ ಗೇಟ್' ಎದುರು ಪ್ರತಿಭಟನೆ ನಡೆಸಿತು.
ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ವಿವೇಕ್ ರೆಡ್ಡಿ, ನ್ಯಾಯಾಂಗವು ಪ್ರಜಾಪ್ರಭುತ್ವದ ಅಡಿಗಲ್ಲು, ವಕೀಲರೊಬ್ಬರು ಸಿಜೆಐಗೆ ಎಸೆದ ಕೃತ್ಯವು ಪ್ರಜಾಪ್ರಭುತ್ವದ ಕಂಬಗಳನ್ನು ಅಲ್ಲಾಡಿಸುವ ಪ್ರಯತ್ನವಾಗಿದ್ದು, ಇದನ್ನು ಸಹಿಸಲು ಸಾಧ್ಯವಿಲ್ಲ. ಈ ಘಟನೆ ಇತಿಹಾಸದಲ್ಲಿ ಕಪ್ಪುಚುಕ್ಕೆಯಾಗಿ ಉಳಿಯುತ್ತದೆ ಎಂದರು.
ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ.ರಂಗನಾಥ್ ಮಾತನಾಡಿ, ನ್ಯಾಯಾಂಗವನ್ನು ದುರ್ಬಲಗೊಳಿಸಲು ನ್ಯಾಯಾಂಗದ ಮೇಲೆ ಅನೇಕ ಬಾರಿ ಹಲ್ಲೆಗಳು ನಡೆದಿವೆ. ಶೂ ಎಸೆದ ವಕೀಲನನ್ನು ಕೂಡಲೇ ಬಂಧಿಸಿ ವಿಚಾರಣೆ ನಡೆಸಬೇಕೆಂದರು.
ಪ್ರತಿಭಟನೆಯಲ್ಲಿ ಎಎಬಿ ಪ್ರಧಾನ ಕಾರ್ಯದರ್ಶಿ ಎಚ್.ವಿ.ಪ್ರವೀಣ್ ಗೌಡ, ಉಪಾಧ್ಯಕ್ಷ ಸಿ.ಎಸ್.ಗಿರೀಶ್ ಕುಮಾರ್, ಖಜಾಂಚಿ ಶ್ವೇತಾ, ಎಸ್. ರಾಜು, ಎಂ.ಚಾಮರಾಜ, ಆತ್ಮ ವಿ.ಹಿರೇಮಠ, ತಮ್ಮಯ್ಯ, ಡಿ.ಎಲ್. ಜಗದೀಶ್, ಜಿ.ಆರ್.ಮೋಹನ್, ವೆಂಕಟೇಶ, ಮುನಿಗಂಗಪ್ಪ ಸಹಿತ 40ಕ್ಕೂ ಅಧಿಕ ವಕೀಲರು ಪಾಲ್ಗೊಂಡಿದ್ದರು.







