ಸಿಜೆಐ ಮೇಲೆ ಶೂ ಎಸೆದ ಪ್ರಕರಣ | ಆರೋಪಿಯ ವಿರುದ್ಧ ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಲು ದಸಂಸ ಮನವಿ

ಬೆಂಗಳೂರು, ಅ. 9 : ‘ಸುಪ್ರೀಂ ಕೋರ್ಟ್‍ನ ಮುಖ್ಯ ನ್ಯಾಯಮೂರ್ತಿಗಳ ಮೇಲಿನ ದಾಳಿಯು ದೇಶದ ಘನತೆಯ ಮೇಲಿನ ದಾಳಿಯೇ ಆಗಿದೆ. ಹೀಗಾಗಿ ಆರೋಪಿ ರಾಕೇಶ್ ಕಿಶೋರ್‍ನನ್ನು ಕೂಡಲೇ ಬಂಧಿಸಿ, ಆತನ ವಿರುದ್ಧ ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು’ ಎಂದು ದಲಿತ ಸಂಘರ್ಷ ಸಮಿತಿ-ಕರ್ನಾಟಕ, ರಾಜ್ಯಪಾಲರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದೆ.
ಗುರುವಾರ ದಸಂಸ ಬೆಂಗಳೂರು ವಿಭಾಗೀಯ ಸಂಚಾಲಕ ಮಂಜುನಾಥ್ ಅಣ್ಣಯ್ಯ ನೇತೃತ್ವದ ನಿಯೋಗವು ಮನವಿ ಸಲ್ಲಿಸಿದ್ದು, ‘ಸಿಜೆಐ ಗವಾಯಿ ಅವರ ಮೇಲೆ ನಡೆದ ಶೂ ಎಸೆದ ಘಟನೆ ನಾಗರಿಕ ಸಮಾಜ ತಲೆತಗ್ಗಿಸುವಂತಹದ್ದು. ಇದು ವ್ಯಕ್ತಿಯೊಬ್ಬರ ಮೇಲೆ ನಡೆದ ದಾಳಿಯಲ್ಲ, ನ್ಯಾಯಾಂಗ ಮತ್ತು ಸಂವಿಧಾನದ ಮೇಲಿನ ದಾಳಿಯಾಗಿದೆ ಎಂದು ವಿಶ್ಲೇಷಿಸಿದ್ದಾರೆ.
ದಾಳಿ ನಡೆಸಿದ ಆರೋಪಿ ರಾಕೇಶ್ ಕಿಶೋರ್ ಮನುವಾದಿ ಮನಸ್ಥಿತಿಯನ್ನು ಹೊಂದಿದ್ದು, ಇದು ಮತಾಂಧರು ನಡೆಸಿದ ಭಯೋತ್ಪಾದಕ ದಾಳಿಯೇ ಆಗಿದೆ. ದೇಶದ ಅತ್ಯುನ್ನತ ಸ್ಥಾನದಲ್ಲಿದ್ದರೂ ಜಾತಿಯ ಶೋಷಣೆ ತಪ್ಪಿದ್ದಲ್ಲ ಎನ್ನುವುದಕ್ಕೆ ಈ ಘಟನೆ ಉದಾಹರಣೆಯಾಗಿದೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ ನಮ್ಮ ದೇಶದ ಸಂವಿಧಾನ ಅಪಾಯದಲ್ಲಿದೆ ಎಂಬ ಮುನ್ಸೂಚನೆಯಾಗಿದೆ ಎಂದು ಮಂಜುನಾಥ್ ತಿಳಿಸಿದ್ದಾರೆ.
ಮುಖ್ಯ ನ್ಯಾಯಮೂರ್ತಿಗಳ ಮೇಲಿನ ದಾಳಿಯನ್ನು ಖಂಡಿಸಿ, ಆರೋಪಿಯ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವ ಬದಲಿಗೆ ಬಿಜೆಪಿ, ಆರೆಸ್ಸೆಸ್ ಬೆಂಬಲಿಗರು ಆತನ ಪರವಾಗಿ ಮಾತನಾಡುತ್ತಿರುವುದು ನಾಚಿಕೆಗೇಡಿನ ಸಂಗತಿ. ಸಿಜೆಐ ಗವಾಯಿ ಅವರಿಗೆ ಸೂಕ್ತ ರಕ್ಷಣೆ ಕಲ್ಪಿಸಲು ಕೇಂದ್ರ ಸರಕಾರಕ್ಕೆ ಸೂಚನೆ ನೀಡಬೇಕು ಎಂದು ದಸಂಸ ಸಂಚಾಲಕರಾದ ಡಾ.ಡಿಜಿ.ಸಾಗರ್, ಅಣ್ಣಯ್ಯ, ಬೆನ್ನಿಗಾನಹಳ್ಳಿ ರಾಮಚಂದ್ರ ಕೋರಿದ್ದಾರೆ.







