ಕೆ.ಆರ್.ಪುರಂನ ‘ಮಸ್ಜಿದ್ ಎ ನೂರ್’ನಲ್ಲಿ ಮಸೀದಿ ದರ್ಶನ ಕಾರ್ಯಕ್ರಮ

ಬೆಂಗಳೂರು, ಅ.12: ಮಸೀದಿಗಳ ಕುರಿತಂತೆ ಜನಸಾಮಾನ್ಯರಿಗೆ ಇರುವ ಕುತೂಹಲವನ್ನು ತಣಿಸಲು ಮಸೀದಿ ದರ್ಶನ ಕಾರ್ಯಕ್ರಮವು ನಗರದ ಕೆ.ಆರ್.ಪುರಂ ಮೆಟ್ರೋ ರೈಲು ನಿಲ್ದಾಣದ ಬಳಿಯಿರುವ ‘ಮಸ್ಜಿದ್ ಎ ನೂರ್’ ಅಲ್ಲಿ ಶನಿವಾರ ಸಂಜೆ ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೆ ಆಗಮಿಸಿದ್ದ ನೂರಾರು ಸಾರ್ವಜನಿಕರು ಮಸೀದಿ, ನಮಾಝ್‍ನ ಕ್ರಮ, ಸಾಮೂಹಿಕ ನಮಾಝ್, ನಮಾಝ್ ಮುಂಚಿತವಾಗಿ ನಿರ್ವಹಿಸುವ ಅಂಗಸ್ನಾನ (ವುಜೂ), ಮಿಂಬರ್ (ಭಾಷಣ ಪೀಠ), ಮೆಹ್ರಾಬ್ (ನಮಾಜ್ ಗೆ ನೇತೃತ್ವ ವಹಿಸುವ ಸ್ಥಳ), ಅಝಾನ್(ನಮಾಝ್‍ಗಾಗಿ ಕರೆ), ಮಸೀದಿಯಲ್ಲಿ ನಡೆಯುವ ಸಮಾಜಮುಖಿ ಕಾರ್ಯಕ್ರಮಗಳು ಇತ್ಯಾದಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡಲಾಯಿತು.
ಮಸ್ಜಿದ್ ಎ ನೂರ್ ಆಡಳಿತ ಸಮಿತಿಯ ಅಧ್ಯಕ್ಷ ದಾವೂದ್, ಪದಾಧಿಕಾರಿಗಳು, ಜಮಾಅತೆ ಇಸ್ಲಾಮಿ ಹಿಂದ್ ಬೆಂಗಳೂರು ನಗರ ಸಂಚಾಲಕ ಶೇಖ್ ಹಾರೂನ್ ಸಪ್ದರ್, ರಾಜ್ಯ ಕಾರ್ಯದರ್ಶಿ ಮೌಲಾನಾ ಲಬೀದ್ ಶಾಫಿ, ಹೀರಾ ಫೌಂಡೇಶನ್ ಟ್ರಸ್ಟ್ ನ ಮುಖ್ಯಸ್ಥ ಶಮೀರ್, ಹಂಝ ಕುಂಜ್, ಜಮಾಅತ್ ಸದಸ್ಯ ಮಸೂದ್ ಶರೀಫ್ ಉಪಸ್ಥಿತರಿದ್ದರು.
ಗೈಡ್ ಆಗಿ ಮುಹಮ್ಮದ್ ನವಾಝ್, ರಶೀದ್, ಮುಹಮ್ಮದ್ ಇಸಾಕ್, ಸಯ್ಯದ್ ಮುರಾದ್, ಮಹಮ್ಮದ್ ಪೀರ್ ಲಟಗೇರಿ ರವರು ಕನ್ನಡ, ಇಂಗ್ಲಿಷ್ ಮತ್ತು ಇತರೆ ಭಾಷೆಗಳಲ್ಲಿ ಮಸೀದಿ ಕುರಿತು ವಿವರಣೆ ನೀಡಿದರು.







