ಲಿಂಗತ್ವ ಅಲ್ಪಸಂಖ್ಯಾತರಿಗೂ ಸಮಾನ ಅವಕಾಶಗಳು ಸಿಗಬೇಕು : ಆಗಾ ಸುಲ್ತಾನ್

ಬೆಂಗಳೂರು, ಅ.12 : ಸಾಮಾಜಿಕ ಸಬಲೀಕರಣದ ಹಿನ್ನೆಲೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಗೂ ಸಮಾನ ಅವಕಾಶಗಳು ಸಿಗುವಂತಾಗಬೇಕು ಎಂದು ರಾಜ್ಯ ಸರಕಾರದ ಕೇಂದ್ರ ಪರಿಹಾರ ಸಮಿತಿಯ ಅಧ್ಯಕ್ಷ ಆಗಾ ಸುಲ್ತಾನ್ ಅಭಿಪ್ರಾಯಪಟ್ಟರು.
ರವಿವಾರ ನಗರದ ಸುಮನಹಳ್ಳಿಯಲ್ಲಿರುವ ಕೇಂದ್ರ ಪರಿಹಾರ ಸಮಿತಿಯ ಕಚೇರಿಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳ ಕಾರ್ಯಕರ್ತೆ ಅಕ್ಕೈ ಪದ್ಮಶಾಲಿ ನೇತೃತ್ವದಲ್ಲಿ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಪ್ರತಿನಿಧಿಗಳೊಂದಿಗೆ ನಡೆಸಿದ ಸಭೆಯಲ್ಲಿ ಅವರು ಮಾತನಾಡಿದರು.
ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳ ಸಮಾನತೆ, ಸ್ವಾವಲಂಬನೆ ಮತ್ತು ಸಾಮಾಜಿಕ ಸೇರ್ಪಡೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಈ ಸಭೆಯು, ಅವರ ಕಾಳಜಿ ಮತ್ತು ಆಕಾಂಕ್ಷೆಗಳನ್ನು ಅರ್ಥ ಮಾಡಿಕೊಳ್ಳಲು ವೇದಿಕೆಯನ್ನು ಒದಗಿಸಿದೆ ಎಂದು ಆಗಾ ಸುಲ್ತಾನ್ ಹೇಳಿದರು.
ಲಿಂಗತ್ವ ಅಲ್ಪಸಂಖ್ಯಾತರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಅಕ್ಕೈ ಪದ್ಮಶಾಲಿ ಸಭೆಯ ಗಮನಕ್ಕೆ ತಂದರು. ಅಲ್ಲದೇ, ಟ್ರಾನ್ಸ್‌ಜೆಂಡರ್ ನೀತಿ 2017 ಅನ್ನು ಅನುಷ್ಠಾನ ಮಾಡಬೇಕು, ಸಮುದಾಯದವರಿಗೆ ಕೌಶಲ್ಯ ಅಭಿವೃದ್ಧಿ ಮತ್ತು ವೃತ್ತಿಪರ ತರಬೇತಿ ನೀಡಬೇಕು, ಉದ್ಯೋಗಾವಕಾಶಗಳು ಒದಗಿಸಬೇಕು, ಸಾಮಾಜಿಕ ಸೇರ್ಪಡೆ ಮತ್ತು ಸ್ವೀಕಾರಕ್ಕೆ ಒತ್ತು ನೀಡಬೇಕು, ಸಮುದಾಯ ಎದುರಿಸುತ್ತಿರುವ ಕಿರುಕುಳವನ್ನು ತಡೆಗಟ್ಟಲು ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಮೂಲಭೂತ ವಸತಿ ಮತ್ತು ಆಶ್ರಯವನ್ನು ಒದಗಿಸಬೇಕು ಎಂದು ಮನವಿ ಸಲ್ಲಿಸಿದರು.
ಕೇಂದ್ರ ಪರಿಹಾರ ಸಮಿತಿಯು ತಮ್ಮ ಬೇಡಿಕೆಗಳನ್ನು ರಾಜ್ಯ ಸರಕಾರದ ಗಮನಕ್ಕೆ ತಂದು, ಆದ್ಯತೆಯ ಮೇಲೆ ಅವುಗಳ ಈಡೇರಿಕೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಭರವಸೆ ನೀಡಿದ ಆಗಾ ಸುಲ್ತಾನ್, ಸಂಚಾರ ಸಿಗ್ನಲ್‍ಗಳಲ್ಲಿ ಭಿಕ್ಷಾಟನೆ ಮಾಡುವುದನ್ನು ತಡೆಯಲು ಸಮುದಾಯದ ಸದಸ್ಯರನ್ನು ಪ್ರೋತ್ಸಾಹಿಸುವ ಮೂಲಕ ಬೆಂಗಳೂರು ನಗರವನ್ನು ‘ಭಿಕ್ಷಾಟನೆ ಮುಕ್ತ’ಗೊಳಿಸುವ ನಮ್ಮ ಉಪಕ್ರಮದೊಂದಿಗೆ ಕೈಜೋಡಿಸಲು ವಿನಂತಿಸಿದರು.
ಸಭೆಯಲ್ಲಿ ಕೇಂದ್ರ ಪರಿಹಾರ ಸಮಿತಿಯ ಕಾರ್ಯದರ್ಶಿ ವಿಜಯ್ ಕುಮಾರ್, ಜಂಟಿ ಕಾರ್ಯದರ್ಶಿ ಚಂದ್ರಪ್ಪ ಬಿ.ಗೋಕಾಕ್, ರಾಜ್ಯದ ವಿವಿಧ ಪರಿಹಾರ ಕೇಂದ್ರಗಳ ಮೇಲ್ವಿಚಾರಕರು ಮತ್ತು ಅಧಿಕಾರಿಗಳು ಭಾಗವಹಿಸಿದ್ದರು.







