ಬೆಂಗಳೂರು | ಸಾಲ ವಾಪಸ್ ಕೇಳಿದ್ದಕ್ಕೆ ವ್ಯಕ್ತಿಯ ಅಪಹರಿಸಿ ಚಿತ್ರಹಿಂಸೆ: ಹಲವರ ವಿರುದ್ಧ ಪ್ರಕರಣ ದಾಖಲು

ಬೆಂಗಳೂರು, ಅ.12 : ಸಾಲದ ಹಣವನ್ನು ವಾಪಸ್ ಕೇಳಿದ್ದಕ್ಕೆ ಓರ್ವ ವ್ಯಕ್ತಿಯನ್ನು ಅಪಹರಿಸಿ, ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಚಿತ್ರಹಿಂಸೆ ನೀಡಿದ ಆರೋಪದಡಿ ಹಲವರ ವಿರುದ್ಧ ಇಲ್ಲಿನ ಕೋರಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣಕ್ಕೊಳಗಾಗಿದ್ದ ಸಗಾಯ್ ರಾಜ್ ಎಂಬಾತ ನೀಡಿದ ದೂರಿನನ್ವಯ ಆನಂದ್ ಕುಮಾರ್, ಆಶಿಶ್ ಮತ್ತು ಐಶ್ವರ್ಯಾ ಸೇರಿ ಹಲವರ ವಿರುದ್ಧ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಆನಂದ್ ಕುಮಾರ್ ಎಂಬಾತನಿಗೆ ಸಗಾಯ್ ರಾಜ್ ಅವರು 3 ಲಕ್ಷ ರೂ. ಹಣ ನೀಡಿದ್ದು, ನಂತರ ಮನೆ ಮಾರಾಟ ಮಾಡುತ್ತೇನೆ ಎಂದು ಆನಂದ್ ಹೇಳಿದ್ದಕ್ಕೆ ತಾನೇ ಮನೆ ಖರೀದಿಸುವುದಾಗಿ ಸಗಾಯ್ ರಾಜ್ ತಿಳಿಸಿದ್ದಾನೆ. ಈ ಹಿನ್ನೆಲೆ ಅಗ್ರಿಮೆಂಟ್‍ಗೂ ಮುನ್ನ 1 ಕೋಟಿ ರೂ., ಅನಂತರ ಉಳಿದ ಹಣ ನೀಡುವುದಾಗಿ ಇಬ್ಬರ ನಡುವೆ ಮಾತುಕತೆಯಾಗಿದೆ. ಈ ನಡುವೆ ಮನೆ ನೋಂದಣಿ (ರಿಜಿಸ್ಟ್ರೇಷನ್) ಮಾಡದ್ದಕ್ಕೆ ಸಗಾಯ್ ರಾಜ್ ತನ್ನ ಹಣ ವಾಪಸ್ ಕೇಳಿದ್ದಾನೆ. ಇದೇ ಕಾರಣಕ್ಕೆ ಅ.11ರಂದು ಸಗಾಯ್ ರಾಜ್ ಕಾರಿನಲ್ಲಿ ಹೋಗುತ್ತಿರುವಾಗ ಆರೋಪಿಗಳು ಅಪಹರಿಸಿದ್ದರು ಎಂದು ಆರೋಪಿಸಲಾಗಿದೆ.
ದ್ವಿಚಕ್ರ ವಾಹನದಲ್ಲಿ ಬಂದಿದ್ದ ಅಪರಿಚಿತರು ಸಗಾಯ್ ಮುಖಕ್ಕೆ ಬಟ್ಟೆ ಕಟ್ಟಿ ಅಪಹರಿಸಿದ್ದು, ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾರೆ. ನಂತರ ಕೈಕಾಲು ಕಟ್ಟಿ ಸಗಾಯ್ ಮರ್ಮಾಂಗ ಹಾಗೂ ತೊಡೆಗೆ ಸಿಗರೇಟ್‍ನಿಂದ ಸುಟ್ಟು ಚಿತ್ರಹಿಂಸೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಇನ್ನು, ಅ.12ರಂದು ಸಾರ್ವಜನಿಕರ ನೆರವಿನಿಂದ ಆರೋಪಿಗಳಿಂದ ತಪ್ಪಿಸಿಕೊಂಡ ಸಗಾಯ್, ಆ ಬಳಿಕ ಸಂಚಾರ ಪೊಲೀಸರನ್ನು ಸಂಪರ್ಕಿಸಿ ದೂರು ದಾಖಲಿಸಿದ್ದಾರೆ.





