‘ಲಕ್ಕುಂಡಿ’ಗೆ ಯುನೆಸ್ಕೋ ಸ್ಥಾನಮಾನ : ಎಚ್.ಕೆ.ಪಾಟೀಲ್

ಬೆಂಗಳೂರು : ಗದಗ ಜಿಲ್ಲೆಯ ಲಕ್ಕುಂಡಿಯನ್ನು ಯುನೆಸ್ಕೋ ಜಾಗತಿಕ ಪಾರಂಪರಿಕ ತಾಣದ ಸ್ಥಾನಮಾನವನ್ನು ದೊರಕಿಸಲು ಕರ್ನಾಟಕ ಸರಕಾರ ಕಾರ್ಯೋನ್ಮುಖವಾಗಿದೆ. ಆ ಮೂಲಕ ಕರ್ನಾಟಕವನ್ನು ಪಾರಂಪರಿಕ ಪ್ರವಾಸೋದ್ಯಮದ ಮುಂಚೂಣಿ ರಾಜ್ಯವನ್ನಾಗಿ ಪರಿವರ್ತಿಸಲು ಶ್ರಮಿಸುತ್ತಿದೆ ಎಂದು ಕಾನೂನು ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.
ಮಂಗಳವಾರ ರಾಜಸ್ಥಾನದ ಉದಯಪುರದಲ್ಲಿ ನಡೆಯುತ್ತಿರುವ ಪ್ರವಾಸೋದ್ಯಮದ ಹೊಸ ಉಪಕ್ರಮಗಳ ಬಗ್ಗೆ ರಾಜ್ಯ ಪ್ರವಾಸೋದ್ಯಮ ಸಚಿವರ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜಾಗತಿಕ ಸ್ಪರ್ಧಾತ್ಮಕ ಪ್ರವಾಸೋದ್ಯಮ 50 ತಾಣಗಳನ್ನು ಅಭಿವೃದ್ಧಿಪಡಿಸುವ ಕೇಂದ್ರ ಸರಕಾರದ ರಾಷ್ಟ್ರೀಯ ಮಿಷನ್‌ನ ಅಡಿಯಲ್ಲಿ ಕರ್ನಾಟಕ ಸರಕಾರವು ಗದಗ, ಹಂಪಿ, ಮೈಸೂರು ಮತ್ತು ಉಡುಪಿಗಳನ್ನು ಭವಿಷ್ಯೋತ್ತರ ಜಾಗತಿಕ ತಾಣಗಳೆಂದು ಪರಿಗಣಿಸಬೇಕೆಂದು ಸರಕಾರ ಪ್ರಸ್ತಾಪಿಸಿದೆ ಎಂದರು.
ಪಾರಂಪರಿಕ ಜಾಗತಿಕ ತಾಣದ ಎಲೆಮರೆಯ ಕಾಯಿಯಂತೆ ಅನರ್ಘ್ಯ ರತ್ನದಂತಹ ತಾಣವಾಗಿರುವ ಗದಗ ಪರಂಪರೆ, ನಿಸರ್ಗ ಮತ್ತು ಸಂಸ್ಕೃತಿಗಳ ಸಮ್ಮೀಲನವಾಗಿ ಪರಿಪಕ್ವವಾದ ಸೌಹಾರ್ದವನ್ನು ಪಡೆದಿರುವ ಗದಗ ಜಿಲ್ಲೆ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಕೇವಲ 40 ನಿಮಿಷಗಳ ಪ್ರಯಾಣದ ದೂರದಲ್ಲಿದೆ. ಗದಗದಿಂದ ಕೇವಲ 8 ಕಿ.ಮೀ ದೂರದಲ್ಲಿರುವ ಲಕ್ಕುಂಡಿ ಚಾಲುಕ್ಯರ ಶಿಲ್ಪಕಲೆಯ ಬಯಲು ವಸ್ತು ಸಂಗ್ರಹಾಲಯವೆಂದು ಕರೆಯಲ್ಪಡುತ್ತದೆ. 100 ಗಹನವಾದ ಕೆತ್ತನೆಯ ದೇವಾಲಯಗಳು, ಆಳವಾದ ಬಾವಿಗಳು, ಜೈನಬಸದಿಗಳು ಮತ್ತು ಪ್ರಾಚೀನ ಯುಗದ ಶಿಲ್ಪಕಲೆಯ ಚಾಣಾಕ್ಷತನವನ್ನು ಪ್ರತಿಬಿಂಬಿಸುವ ಶಿಲಾಶಾಸನಗಳನ್ನು ಹೊಂದಿದೆ ಎಂದರು.
ಸರಕಾರ 343ಕಿ.ಮೀ ಉದ್ದದ ಕರಾವಳಿಯನ್ನು ಕೇಂದ್ರೀಕೃತವಾಗಿಸಿ, ಅಭಿವೃದ್ಧಿಪಡಿಸಿ ಉನ್ನತ ಸ್ಥರದ ಪ್ರವಾಸೋದ್ಯಮ ತಾಣವನ್ನಾಗಿ ಪರಿವರ್ತಿಸಲು ಪ್ರತ್ಯೇಕ ಕರಾವಳಿ ಪ್ರವಾಸೋದ್ಯಮ ನೀತಿಯನ್ನು ಸಿದ್ಧಪಡಿಸುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ಸಮ್ಮೇಳನದಲ್ಲಿ ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರಸಿಂಗ್ ಶೇಖಾವತ್ ಹಾಗೂ ಎಲ್ಲ ರಾಜ್ಯದ ಪ್ರವಾಸೋದ್ಯಮ ಸಚಿವರು ಭಾಗವಹಿಸಿದ್ದರು.







