ತಾಯಂದಿರ ಮರಣ ಅನುಪಾತ ಕಡಿಮೆ ಮಾಡಲು ‘ಕ್ರಿಯಾ ಯೋಜನೆ ಸಿದ್ಧ’

ಸಾಂದರ್ಭಿಕ ಚಿತ್ರ | PC : freepik.com
ಬೆಂಗಳೂರು, ಅ.14 : ಸರಕಾರವು ರಾಜ್ಯದಲ್ಲಿ ತಾಯಂದಿರ ಮರಣ ಅನುಪಾತವನ್ನು ಕಡಿಮೆ ಮಾಡಲು ಸಮಗ್ರ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿದ್ದು, ‘ತಾಯಂದಿರ ಶೂನ್ಯ ಮರಣ ಮಿಷನ್’ಗಾಗಿ 139 ಕೋಟಿ ರೂ.ಗಳನ್ನು ವಿನಿಯೋಗ ಮಾಡಲು ಅನುಮೋದನೆ ನೀಡಿದೆ.
ರಾಜ್ಯ ನಾಲ್ಕು ಗಣಿ ಬಾಧಿತ ಜಿಲ್ಲೆಗಳ 10 ತಾಲೂಕಿಗೆ ಸೇರಿದ ಗರ್ಭಿಣಿಯರಿಗೆ ಪ್ರೋತ್ಸಾಹಧನ ಹೆಚ್ಚಿಸಲಾಗಿದ್ದು, ಇದಕ್ಕಾಗಿ 24.84 ಕೋಟಿ ರೂ.ಗಳನ್ನು ಮೀಸಲಿಡಲಾಗುವುದು. ತಾಯಂದಿರ ಮರಣ ತಡೆಗಟ್ಟುವಿಕೆಗೆ ಅಗತ್ಯವಾದ ಔಷಧಗಳು, ಉಪಭೋಗ್ಯ ವಸ್ತುಗಳು ಮತ್ತು ಸಲಕರಣೆಗಳೊಂದಿಗೆ ಸಾರ್ವಜನಿಕ ಆರೋಗ್ಯ ಆರೈಕೆ ಸೌಲಭ್ಯಗಳನ್ನು ಬಲಪಡಿಸಲು 27.87 ಕೋಟಿ ರೂ.ಗಳ ಅನುದಾನವನ್ನು ಒದಗಿಸಲಾಗುವುದು.
ಎಂಸಿಎಚ್(ಮೀನ್ ಕಾರ್ಪಸ್ಕುಲರ್ ಹಿಮೋಗ್ಲೋಬಿನ್) ವಿಭಾಗಗಳಲ್ಲಿನ ಹಾಸಿಗೆಗಳನ್ನು ಮೇಲ್ದರ್ಜೆಗೇರಿಸಲು 27.43 ಕೋಟಿ ರೂ.ಗಳನ್ನು, ವೈದ್ಯಕೀಯ ಕಾಲೇಜು ಅಧ್ಯಾಪಕರಿಂದ ಮಾರ್ಗದರ್ಶನದ ಸೌಲಭ್ಯಕ್ಕಾಗಿ 10 ಕೋಟಿ ರೂ.ಗಳನ್ನು, ತುರ್ತು ಪ್ರಕರಣಗಳ ನಿರ್ವಹಣೆಗಾಗಿ ಖಾಸಗಿ ಸೌಲಭ್ಯಗಳ ಪ್ಯಾಕೇಜ್ ಅನ್ನು ಅಭಿವೃದ್ಧಿಪಡಿಸಲು 30 ಕೋಟಿ ರೂ.ಗಳನ್ನು, ರಾಜ್ಯ ಮತ್ತು ಜಿಲ್ಲಾಮಟ್ಟದಲ್ಲಿ ಕಾಲ್ ಸೆಂಟರ್ಗಳನ್ನು ಅನುಷ್ಠಾನ ಮಾಡಲು 10 ಕೋಟಿ ರೂ.ಗಳನ್ನು ಒದಗಿಸಲಾಗುವುದು.
ಕೋಣೆಗಳ ನಿರ್ಮಾಣ, ರಾಜ್ಯದ ಪ್ರಸೂತಿ-ಎಚ್ಡಿಯು/ಐಸಿಯುಗಳ ಸಂಖ್ಯೆಯನ್ನು ವಿಸ್ತರಣೆ, ಸಾರ್ವಜನಿಕ ಆಸ್ಪತ್ರೆಗಳಲ್ಲಿ ಹೆರಿಗೆಗೆ ಒಳಗಾಗುವ ಮಹಿಳೆಯರ ಮೇಲ್ವಿಚಾರಣೆಗಾಗಿ ರಾಜ್ಯಕ್ಕೆ ವಿಶೇಷ ಸಾಫ್ಟ್ ವೇರ್ ಅಭಿವೃದ್ಧಿಪಡಿಸುವುದು ಸೇರಿ ಮತ್ತಿತರ ಕಾರ್ಯಗಳಿಗಾಗಿ ಉಳಿಕೆ ಅನುದಾನವನ್ನು ಖರ್ಚು ಮಾಡಲು 139 ಕೋಟಿ ರೂ.ಗಳಿಗೆ ಸರಕಾರ ಅನುಮೋದನೆ ನೀಡಿದೆ.







