ನೋಂದಣಿ ರಹಿತ ಹಜ್ ಟೂರ್ ಆಪರೇಟರ್ಗಳ ಸಕ್ರಮಕ್ಕೆ ಕ್ರಮ : ಝುಲ್ಫಿಕರ್ ಅಹ್ಮದ್ ಖಾನ್

Photo: twitter.com/MoHU_En/media
ಬೆಂಗಳೂರು, ಅ.15: ಕಡಿಮೆ ದರದಲ್ಲಿ ಹಜ್, ಉಮ್ರಾ ಯಾತ್ರೆಗಳಿಗೆ ಕರೆದುಕೊಂಡು ಹೋಗುವುದಾಗಿ ಜಾಹೀರಾತುಗಳನ್ನು ನೀಡಿ, ಜನರನ್ನು ವಂಚಿಸುವವರ ಬಗ್ಗೆ ಎಚ್ಚರಿಕೆ ವಹಿಸಬೇಕಿದೆ. ಆದುದರಿಂದ, ನೋಂದಣಿ ರಹಿತ ಹಜ್ ಟೂರ್ ಆಪರೇಟರ್ಗಳನ್ನು ಸಕ್ರಮಗೊಳಿಸಲು ಕ್ರಮ ಕೈಗೊಳ್ಳಬೇಕಿದೆ ಎಂದು ರಾಜ್ಯ ಹಜ್ ಸಮಿತಿ ಅಧ್ಯಕ್ಷ ಝುಲ್ಫಿಕರ್ ಅಹ್ಮದ್ ಖಾನ್(ಟಿಪ್ಪು) ತಿಳಿಸಿದರು.
ಬುಧವಾರ ನಗರದ ಇನ್ಫೆಂಟ್ರಿ ರಸ್ತೆಯಲ್ಲಿರುವ ಗುಲಿಸ್ತಾನ್ ಶಾದಿ ಮಹಲ್ನಲ್ಲಿ ಆಯೋಜಿಸಲಾಗಿದ್ದ ರಾಜ್ಯ ಹಜ್ ಆರ್ಗನೈಸರ್ಸ್ ಅಸೋಸಿಯೇಷನ್ನ 8ನೆ ಸರ್ವ ಸದಸ್ಯರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ನೋಂದಣಿ ರಹಿತ ಹಜ್ ಟೂರ್ ಆಪರೇಟರ್ಗಳನ್ನು ಸಕ್ರಮಗೊಳಿಸುವ ಸಂಬಂಧ ಏನೆಲ್ಲ ಕ್ರಮಗಳನ್ನು ಕೈಗೊಳ್ಳಬಹುದು ಎಂಬುದರ ಕುರಿತು ಹಜ್ ಸಮಿತಿಯ ಕಚೇರಿಯಲ್ಲಿ ಒಂದು ದಿನದ ಕಾರ್ಯಾಗಾರ ಮಾಡಿ ಚರ್ಚೆ ನಡೆಸೋಣ, ಇದರಿಂದ ಜನ ಸಾಮಾನ್ಯರು ವಂಚನೆಗೊಳಗಾಗುವುದನ್ನು ತಪ್ಪಿಸಬಹುದು ಎಂದು ಅವರು ಹೇಳಿದರು.
ಹಜ್ ಯಾತ್ರಿಗಳಿಗಾಗಿ ರಾಜ್ಯ ಹಜ್ ಸಮಿತಿ ವತಿಯಿಂದ ಎಲ್ಲ ಜಿಲ್ಲೆಗಳಲ್ಲಿ ಆಯೋಜಿಸಲಾಗುವ ತರಬೇತಿ ಶಿಬಿರಗಳು, ಲಸಿಕೆ ಹಾಕುವ ಶಿಬಿರಗಳಲ್ಲಿ ಖಾಸಗಿ ಟೂರ್ ಆಪರೇಟರ್ಗಳ ಮೂಲಕ ಹಜ್ ಯಾತ್ರೆಗೆ ತೆರಳುವ ಯಾತ್ರಾರ್ಥಿಗಳಿಗೂ ಅವಕಾಶ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಝುಲ್ಫಿಕರ್ ಅಹ್ಮದ್ ಖಾನ್ ತಿಳಿಸಿದರು.
2025ನೆ ಸಾಲಿನ ಹಜ್ ಯಾತ್ರೆಯ ಸಂದರ್ಭದಲ್ಲಿ ಸೌದಿ ಅರೇಬಿಯಾ ಸರಕಾರವು ಏಕಾಏಕಿ ಖಾಸಗಿ ಟೂರ್ ಆಪರೇಟರ್ ಗಳ ಕೋಟಾವನ್ನು ಶೇ.80ರಷ್ಟು ಕಡಿತ ಮಾಡಿದ ಪರಿಣಾಮ ಆರ್ಥಿಕವಾಗಿ ಅವರು ಸಾಕಷ್ಟು ನಷ್ಟ ಅನುಭವಿಸುವಂತಾಯಿತು. ಸಮಸ್ಯೆ ಬಗೆಹರಿಸಲು ಸಚಿವ ಝಮೀರ್ ಅಹ್ಮದ್ ಖಾನ್ ಕೇಂದ್ರ ಸರಕಾರಕ್ಕೆ ಪತ್ರ ಬರೆದರು, ನಾವು ಸ್ವತಃ ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿದರೂ ಏನೂ ಪ್ರಯೋಜನವಾಗಿಲ್ಲ ಎಂದು ಅವರು ಹೇಳಿದರು.
ಆದರೆ, ಈ ಬಾರಿ ಪೂರ್ಣ ಪ್ರಮಾಣದ ಕೋಟಾ ಸಿಕ್ಕಿದೆ. ರಾಜ್ಯ ಹಜ್ ಸಮಿತಿಯಷ್ಟೇ ಅಲ್ಲ, ಖಾಸಗಿ ಟೂರ್ ಆಪರೇಟರ್ಗಳ ಮೂಲಕ ರಾಜ್ಯದಿಂದ ಹೋಗುವ ಎಲ್ಲ ಯಾತ್ರಿಗಳಿಗೆ ಅಗತ್ಯ ನೆರವು ನೀಡಲು ನಾವು ಸಿದ್ಧವಿದ್ದೇವೆ. ಜಿಎಸ್ಟಿ ಸಮಸ್ಯೆ ಕುರಿತು ನನ್ನ ಗಮನ ಸೆಳೆದಿದ್ದಾರೆ. ಈ ಬಗ್ಗೆ ಪ್ರಧಾನಿ, ಕೇಂದ್ರ ಸಚಿವರಿಗೆ ಮುಖ್ಯಮಂತ್ರಿ, ಹಜ್ ಸಚಿವರು ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವರ ಮೂಲಕ ಪತ್ರ ಬರೆದು ಮನವಿ ಸಲ್ಲಿಸಲಾಗುವುದು ಎಂದು ಝುಲ್ಫಿಕರ್ ಅಹ್ಮದ್ ಖಾನ್ ತಿಳಿಸಿದರು.
ರಾಜ್ಯ ಹಜ್ ಆರ್ಗನೈಸರ್ಸ್ ಅಸೋಸಿಯೇಷನ್ ಮುಖ್ಯಸ್ಥ ಇಕ್ಬಾಲ್ ಅಹ್ಮದ್ ಸಿದ್ದೀಖಿ ಮಾತನಾಡಿ, ಕೇಂದ್ರ ಸರಕಾರವು 2016ರಲ್ಲಿ ಹಜ್ ವಿಭಾಗವನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ಬೇರ್ಪಡಿಸಿ, ಅಲ್ಪಸಂಖ್ಯಾತರ ವ್ಯವಹಾರಗಳ ಇಲಾಖೆ ಅಧೀನದಲ್ಲಿ ತರಲಾಯಿತು. ಇದರಿಂದಾಗಿ, ಖಾಸಗಿ ಟೂರ್ ಆಪರೇಟರ್ಗಳು ಪ್ರತಿ ವರ್ಷ ಸವಾಲುಗಳನ್ನು ಎದುರಿಸುವಾಗಿದೆ ಎಂದರು.
2025ರ ಹಜ್ ಯಾತ್ರೆ ಸಂದರ್ಭದಲ್ಲಿ ಟೂರ್ ಆಪರೇಟರ್ಗಳು ಹಾಗೂ ಯಾತ್ರಾರ್ಥಿಗಳು ಅತೀ ಹೆಚ್ಚು ಸಮಸ್ಯೆ, ನಷ್ಟ ಅನುಭವಿಸುವಂತಾಯಿತು. ಸೌದಿ ಅರೇಬಿಯಾ ಸರಕಾರದ ಜೊತೆಗೆ ನಮ್ಮ ದೇಶದ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯದ ನಡುವಿನ ಸಂವಹನದ ಕೊರತೆಯೆ ಇದಕ್ಕೆ ಕಾರಣವಾಗಿರಬಹುದು. ಆದುದರಿಂದ, ಕೇಂದ್ರ ಸರಕಾರ ಹಜ್ ವಿಭಾಗವನ್ನು ಪುನಃ ವಿದೇಶಾಂಗ ವ್ಯವಹಾರಗಳ ಇಲಾಖೆಯಡಿ ತಂದರೆ ಇಂತಹ ಸಮಸ್ಯೆಗಳು ಎದುರಾಗುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ರಾಜ್ಯ ಹಜ್ ಆರ್ಗನೈಸರ್ಸ್ ಅಸೋಸಿಯೇಷನ್ ಅಧ್ಯಕ್ಷ ಶೌಕತ್ ಅಲಿ ಸುಲ್ತಾನ್ ಮಾತನಾಡಿ, ನಮ್ಮ ಸಂಘಟನೆ ಆರಂಭವಾಗಿ 28 ವರ್ಷವಾಗಿದೆ. ಪ್ರತಿ ಮೂರು ವರ್ಷಗಳಿಗೊಮ್ಮೆ ನಾವು ಸರ್ವ ಸದಸ್ಯರ ಸಭೆಯನ್ನು ಕರೆಯುತ್ತೇವೆ. ಇದು 8ನೆ ಸರ್ವ ಸದಸ್ಯರ ಸಭೆಯಾಗಿದೆ. ಹೊಸದಾಗಿ ಅನೇಕ ಮಂದಿ ಉಮ್ರಾ, ಹಜ್ ಟೂರ್ ಆಪರೇಟರ್ಗಳಾಗಿ ಕೆಲಸ ಮಾಡಲು ಪ್ರಾರಂಭಿಸಿದ್ದಾರೆ. ಅವರೆಲ್ಲರಿಗೂ ಮಾನ್ಯತೆ ಕಲ್ಪಿಸಲು ನಮ್ಮ ಸಂಘದಿಂದ ಸದಸ್ಯತ್ವ ನೀಡಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ರಾಜ್ಯ ಹಜ್ ಆರ್ಗನೈಸರ್ಸ್ ಅಸೋಸಿಯೇಷನ್ ಉಪಾಧ್ಯಕ್ಷ ಮಖ್ಬೂಲ್, ಪ್ರಧಾನ ಕಾರ್ಯದರ್ಶಿ ಶಫಿ ಅಹ್ಮದ್, ರಾಜ್ಯ ಹಜ್ ಸಮಿತಿಯ ವಿಶೇಷಾಧಿಕಾರಿ ಸಿದ್ದೀಖ್ ಪಾಷ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







