ಜೆಡಿಎಸ್ ಕೋರ್ ಕಮಿಟಿ ಪುನಾರಚನೆ : ಕುಮಾರಸ್ವಾಮಿಗೆ ಅಧಿಕಾರ

ಬೆಂಗಳೂರು, ಅ. 16: ಜೆಡಿಎಸ್ ಪಕ್ಷ ಸಂಘಟನೆ, ಪಕ್ಷದ ಬೆಳ್ಳಿಹಬ್ಬ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಸೇರಿದಂತೆ ಮುಂಬರುವ ವಿವಿಧ ಚುನಾವಣೆಗಳಲ್ಲಿ ಅನುಸರಿಸಬೇಕಾದ ಕಾರ್ಯತಂತ್ರದ ಬಗ್ಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಉಪಸ್ಥಿತಿಯಲ್ಲಿ ಜೆಡಿಎಸ್ ಕೋರ್ ಕಮಿಟಿ ಹಾಗೂ ಶಾಸಕರ ಸಭೆ ನಡೆಸಲಾಯಿತು.
ಗುರುವಾರ ನಗರದಲ್ಲಿನ ಕೇಂದ್ರ ಸಚಿವ ಕುಮಾರಸ್ವಾಮಿ ನಿವಾಸದಲ್ಲಿ ನಡೆದ ಈ ಸಭೆಯಲ್ಲಿ, ಕೋರ್ ಕಮಿಟಿ ಪುನಾರಚನೆ ಬಗ್ಗೆ ಸಮಗ್ರವಾಗಿ ಚರ್ಚಿಸಲಾಯಿತು ಹಾಗೂ ಪುನಾರಚನೆ ಅಧಿಕಾರವನ್ನು ಕುಮಾರಸ್ವಾಮಿ ಅವರಿಗೆ ನೀಡಲಾಯಿತು ಎಂದು ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್ ಬಾಬು ತಿಳಿಸಿದರು.
ಅಲ್ಲದೆ, ಮುಂಬರುವ 2026ರಲ್ಲಿ ವಿಧಾನ ಪರಿಷತ್‍ಗೆ ನಡೆಯಲಿರುವ ಪಶ್ಚಿಮ, ಆಗ್ನೇಯ ಹಾಗೂ ಈಶಾನ್ಯ ಪದವೀಧರ ಕ್ಷೇತ್ರಗಳು, ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಜೆಡಿಎಸ್ ಪಕ್ಷದ ಉಸ್ತುವಾರಿ ಸಮಿತಿ ರಚನೆ ಮಾಡಲಾಯಿತು. ಪರಿಷತ್ ಸದಸ್ಯರಾದ ಎಸ್.ಎಲ್.ಬೋಜೇಗೌಡ, ವಿವೇಕಾನಂದ, ಎಸ್.ಎನ್.ಮಂಜೇಗೌಡ, ಮಾಜಿ ಶಾಸಕ ಶಿವಶಂಕರ್ ಈ ಸಮಿತಿ ಸದಸ್ಯರಾಗಿರುತ್ತಾರೆ ಎಂದು ಅವರು ಮಾಹಿತಿ ನೀಡಿದರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಂಬರುವ ಚುನಾವಣೆಗೆ ಸಂಬಂಧಿಸಿ ಉಸ್ತುವಾರಿ ಸಮಿತಿ ರಚಿಸಲಾಯಿತು. ಮಾಜಿ ಸಂಸದ ಕುಪೇಂದ್ರ ರೆಡ್ಡಿ, ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಪರಿಷತ್ ಸದಸ್ಯರಾದ ಟಿ.ಎ.ಶರವಣ, ಟಿ.ಜವರಾಯಿ ಗೌಡ ಈ ಸಮಿತಿ ಸದಸ್ಯರಾಗಿರುತ್ತಾರೆ.
ಹಾಗೆಯೇ ನವೆಂಬರ್ ತಿಂಗಳ ಮೊದಲ ವಾರದಲ್ಲಿ ಪಕ್ಷದ ರಾಷ್ಟ್ರೀಯ ಸಮಾವೇಶ ನಡೆಸಲು ಸಭೆ ನಿರ್ಧರಿಸಿದ್ದು, ಆ ಬಗ್ಗೆ ನಡೆಸಬೇಕಾದ ಸಿದ್ಧತೆಗಳ ಬಗ್ಗೆ ಸಮಾಲೋಚನೆ ನಡೆಸಲಾಯಿತು. ನವೆಂಬರ್ 22ರಂದು ಜೆಡಿಎಸ್ ಪಕ್ಷ ಸ್ಥಾಪನೆಯಾಗಿ 25ವರ್ಷ ತುಂಬಲಿದ್ದು, ಪಕ್ಷದ ಬೆಳ್ಳಿಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುವ ನಿರ್ಧಾರವನ್ನು ಸಭೆ ಕೈಗೊಂಡಿತು ಎಂದು ಸುರೇಶ್ ಬಾಬು ಮಾಹಿತಿ ನೀಡಿದರು.







