ಪ್ರಮಾಣೀಕೃತ ಪ್ರಯೋಗ ಶಾಲಾ ತಂತ್ರಜ್ಞರಿಗೆ ಆದ್ಯತೆ ನೀಡುವಂತೆ ಆದೇಶ

ಬೆಂಗಳೂರು, ಅ.18: ಕೇಂದ್ರೀಯ ಮಲೇರಿಯಾ ಪ್ರಯೋಗಶಾಲೆ ಹಾಗೂ ಜಿಲ್ಲಾಮಟ್ಟದ ಇಂಟಿಗ್ರೇಟೆಡ್ ಪಬ್ಲಿಕ್ ಹೆಲ್ತ್ ಲ್ಯಾಬೋರೇಟರಿಗೆ ವರ್ಗಾವಣೆಯ ಮೂಲಕ ಸ್ಥಳನಿಯುಕ್ತಿ ಬಯಸುವ ತಂತ್ರಜ್ಞರ ಪೈಕಿ ವಿಶ್ವ ಆರೋಗ್ಯ ಸಂಸ್ಥೆಯ ಪ್ರಮಾಣೀಕೃತ ತಂತ್ರಜ್ಞರಿಗೆ ಆದ್ಯತೆ ನೀಡಬೇಕು ಎಂದು ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.
ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮದ ಮಾರ್ಗಸೂಚಿಗಳ ಅನ್ವಯ, ಮಲೇರಿಯಾ ಮುನ್ನೆಚ್ಚರಿಕೆ ಮತ್ತು ನಿಯಂತ್ರಣ ಮಾಡಲು ಪ್ರಕರಣಗಳ ಪತ್ತೆ ಹಚ್ಚುವಿಕೆಯು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇದರಿಂದ, ಸಂಪೂರ್ಣ ತೀವ್ರ ಚಿಕಿತ್ಸೆಯನ್ನು ನೀಡಿ ರೋಗಿಯನ್ನು ಗುಣಪಡಿಸುವುದರೊಂದಿಗೆ ಸಮುದಾಯದಲ್ಲಿ ಹಾಗೂ ಸ್ಥಳೀಯವಾಗಿ ಮಲೇರಿಯಾ ಹರಡುವುದನ್ನು ತಡೆಗಟ್ಟಬಹುದಾಗಿದೆ ಎಂದು ತಿಳಿಸಿದೆ.
ಹೀಗಾಗಿ ಪ್ರಸ್ತುತ ಕೇಂದ್ರೀಯ ಪ್ರಯೋಗಶಾಲೆಯಲ್ಲಿ ಕೇಂದ್ರೀಕೃತವಾಗಿ ನಡೆಯುತ್ತಿರುವ ಮಲೇರಿಯಾ ಹಾಗೂ ಫೈಲೇರಿಯಾ ರಕ್ತಲೇಪನಗಳ ಖಚಿತ ಪರೀಕ್ಷೆ ಹಾಗೂ ಅಡ್ಡ ಪರೀಕ್ಷೆಯ ಪ್ರಕ್ರಿಯೆಯನ್ನು ವಿಕೇಂದ್ರೀಕರಣ ಮತ್ತು ಸರಳೀಕರಿಸಲು ಉದ್ದೇಶಿಸಲಾಗಿದೆ. ಅದರಂತೆ, ಜಿಲ್ಲಾಮಟ್ಟದಲ್ಲಿ ಅಂದರೆ, ಇಂಟಿಗ್ರೇಟೆಡ್ ಪಬ್ಲಿಕ್ ಹೆಲ್ತ್ ಲ್ಯಾಬೋರೇಟರಿಯಲ್ಲಿ ಪರೀಕ್ಷೆ ಪ್ರಕ್ರಿಯೆಗಳನ್ನು ನಡೆಸುವುದು ಸೂಕ್ತವಾಗಿದೆ ಎಂದು ತಿಳಿಸಿದೆ.
ಆದುದರಿಂದ, ಖಚಿತಪರೀಕ್ಷೆ ಹಾಗೂ ಅಡ್ಡಪರೀಕ್ಷೆ ಚಟುವಟಿಕೆಯನ್ನು ಜಿಲ್ಲಾಮಟ್ಟದಲ್ಲಿ ಕೈಗೊಳ್ಳುವ ಪ್ರಯೋಗಶಾಲಾ ತಂತ್ರಜ್ಞರು, ಭಾರತ ಸರ್ಕಾರದ ಮಾನದಂಡದ ಅನ್ವಯ ಪ್ರಮಾಣ ಪತ್ರವನ್ನು ಪಡೆಯುವುದು ಕಡ್ಡಾಯವಾಗಿದೆ ಎಂದು ಹೇಳಿದೆ.







