ಕೇಂದ್ರ ಸರಕಾರ ರೈತರ ಅಭ್ಯುದಯಕ್ಕೆ ಬದ್ಧ : ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು, ಅ.19: ಭತ್ತದಂತಹ ಬೆಳೆಗಳ ಜೊತೆಗೆ ಬೇಳೆಕಾಳುಗಳನ್ನು ಬೆಳೆಯಲು ಹೆಚ್ಚು ರೈತರು ಮುಂದಾಗಬೇಕು. ಇದರಿಂದ ಬೇಳೆ ಕಾಳುಗಳ ಆಮದು ತಗ್ಗಲಿದೆ. ಕೇಂದ್ರ ಸರಕಾರ ರೈತರ ಕಲ್ಯಾಣಕ್ಕೆ ಹಲವು ಯೋಜನೆಗಳನ್ನು ಕೈಗೊಂಡಿದೆ. ಕೃಷಿ ಕ್ಷೇತ್ರದ ಪ್ರತಿ ಹಂತವನ್ನು ಪ್ರೊತ್ಸಾಹಿಸುತ್ತಿದೆ. ರೈತರ ಕಲ್ಯಾಣ ಹಾಗೂ ಅಭ್ಯುದಯಕ್ಕೆ ಬದ್ಧವಾಗಿದೆ ಎಂದು ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆಗಳ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ರವಿವಾರ ನಗರದ ಯಲಹಂಕದಲ್ಲಿರುವ ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲ ಬ್ಯೂರೋದ 33ನೆ ಸಂಸ್ಥಾಪನಾ ದಿನಾಚರಣೆ ಹಾಗೂ 3ನೆ ಕೃಷಿ ಕೀಟ ಜೈವಿಕ ನಿಯಂತ್ರಣ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೀಟನಾಶಕಗಳಿಂದ ಮಣ್ಣಿನ ಫಲವತ್ತತೆ ಕಡಿಮೆಯಾಗಲಿದೆ. ಇದರಿಂದ ರೈತರು ಸಹಜ ಕೃಷಿಗೆ ಒತ್ತು ನೀಡಬೇಕು. ಐಸಿಎಆರ್-ಎನ್‍ಬಿಎಐಆರ್ ರೈತರಿಗೆ ಬಲ ತುಂಬುವ ಕೆಲಸ ಮಾಡುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರಕಾರದಲ್ಲಿ, ಭಾರತ ವಿಶ್ವದ ಐದು ಆರ್ಥಿಕ ಶಕ್ತಿಗಳಲ್ಲಿ ಒಂದಾಗಿದ್ದು, ಮೂರನೆ ಆರ್ಥಿಕ ಶಕ್ತಿಶಾಲಿ ದೇಶವಾಗಲಿದೆ ಎಂದು ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ಕೇಂದ್ರ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಹಾಗೂ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ನಮ್ಮ ಹಿಂದಿನ ಪೀಳಿಗೆಯ ಕೃಷಿಕರು ರೈತಮಿತ್ರ ಕೀಟಗಳ ಬಗ್ಗೆ ಹೆಚ್ಚು ಮಾಹಿತಿ ಹೊಂದಿದ್ದರು. ಇಂದಿನ ರೈತರಿಗೂ ಇವುಗಳ ಕುರಿತು ಮಾಹಿತಿ ನೀಡುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ರೈತರು, ಸಂಶೋಧಕರು ಮತ್ತು ವಿಜ್ಞಾನಿಗಳನ್ನು ಸಾವಯವ ಕೃಷಿಯ ಅರಿವು ಮೂಡಿಸಲಾಗುತ್ತಿದೆ. ಅಷ್ಟೇ ಅಲ್ಲದೆ ನೈಸರ್ಗಿಕ ಕೃಷಿ ಅಳವಡಿಸಿಕೊಳ್ಳುವ ರೈತರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ರೈತರು ಆರೋಗ್ಯಕರ, ಔಷಧ ರಹಿತ ಬೆಳೆಗಳನ್ನು ಬೆಳೆದಾಗ ಮಾತ್ರ ನಾವು ಗುಣಮಟ್ಟದ ಪದಾರ್ಥಗಳನ್ನು ಸೇವಿಸಲು ಸಾಧ್ಯ ಎಂದು ಶೋಭಾ ಕರಂದ್ಲಾಜೆ ತಿಳಿಸಿದರು.
ಸಂಸದ ಡಾ.ಸಿ.ಎನ್.ಮಂಜುನಾಥ್ ಮಾತನಾಡಿ, ಮನುಷ್ಯನ ಅರೋಗ್ಯ ನಮ್ಮ ಬೆಳೆಗಳ ಮೇಲೆ ಮತ್ತು ಮಣ್ಣಿನ ಫಲವತ್ತತೆ ಮನುಷ್ಯನ ಆರೋಗ್ಯದ ಮೇಲೆ ಅವಲಂಬಿತವಾಗಿದೆ. ಜೈವಿಕ ಪದ್ಧತಿಯನ್ನು ನಾವು ಹೆಚ್ಚು ಬಳಸುವ ಅಗತ್ಯವಿದೆ. ಸಾವಯವ ಪದ್ಧತಿ ಅಳವಡಿಸಿಕೊಂಡಾಗ ಹೆಚ್ಚಿನ ರೋಗಗಳನ್ನು ತಡೆಯಬಹುದು. ಕೀಟನಾಶಕ ಹಾಗೂ ರಸಗೊಬ್ಬರ ಬಳಕೆ ತಗ್ಗಿಸುವುದು ಅಗತ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉತ್ತಮ ಸಾಧನೆ ಮಾಡಿದ ಕೃಷಿಕರು ಹಾಗೂ ಐಸಿಎಆರ್-ಎನ್‍ಬಿಎಐಆರ್‍ನ ವಿಜ್ಞಾನಿಗಳನ್ನು ಗೌರವಿಸಲಾಯಿತು. ಈ ವೇಳೆ ಸಂಸ್ಥೆಯ ನಿರ್ದೇಶಕ ಡಾ.ಎಸ್.ಎನ್.ಸುಶೀಲ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.







