ಬೆಂಗಳೂರು | ಪಟಾಕಿಯಿಂದ ಗಾಯಗೊಂಡವರಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗಳಲ್ಲಿ ವಿಶೇಷ ತುರ್ತು ವ್ಯವಸ್ಥೆ

ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು, ಅ.20: ದೀಪಾವಳಿ ಹಬ್ಬದ ಸಮಯದಲ್ಲಿ ಪಟಾಕಿಯಿಂದ ಗಾಯಗೊಂಡವರಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಲು ಇಲ್ಲಿನ ನಗರದ ವಿಕ್ಟೋರಿಯಾ ಆಸ್ಪತ್ರೆಯ ಮಹಾಬೋಧಿ ಬರ್ನ್ಸ್ ಸೆಂಟರ್ ಮತ್ತು ಮಿಂಟೋ ಕಣ್ಣಿನ ಆಸ್ಪತ್ರೆ ವಿಶೇಷ ತುರ್ತು ವ್ಯವಸ್ಥೆಗಳನ್ನು ಮಾಡಿಕೊಂಡಿವೆ.
ಬೆಂಕಿ, ಪಟಾಕಿ ಸುಟ್ಟ ಗಾಯಗಳನ್ನು ನಿಭಾಯಿಸಲು ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರು ಮತ್ತು ಶುಶ್ರೂಷಕ ಸಿಬ್ಬಂದಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದ್ದಾರೆ. ಆಸ್ಪತ್ರೆಯ ಮಹಾಬೋಧಿ ಬರ್ನ್ಸ್ ಸೆಂಟರ್ ಅಗತ್ಯ ಔಷಧಿಗಳನ್ನು ಸಂಗ್ರಹಿಸಿದೆ. ಗಂಭೀರ ಪ್ರಕರಣಗಳಿಗಾಗಿ ತನ್ನ ತೀವ್ರ ನಿಗಾ ಘಟಕಗಳನ್ನು ವೆಂಟಿಲೇಟರ್ ಬೆಂಬಲದೊಂದಿಗೆ ಸಜ್ಜುಗೊಳಿಸಿದೆ.
ದೀಪಾವಳಿಯ ಸಮಯದಲ್ಲಿ ಸಾಮಾನ್ಯವಾಗಿ ಸಂಭವಿಸುವ ಕಣ್ಣಿನ ಗಾಯಗಳಿಗೆ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ವಿಶೇಷ ಗಮನ ನೀಡಲಾಗಿದೆ. ಆಸ್ಪತ್ರೆಯು 25 ಹಾಸಿಗೆಗಳನ್ನು ಮೀಸಲಿಟ್ಟಿದೆ. ಪುರುಷರು, ಮಹಿಳೆಯರಿಗೆ ತಲಾ 10 ಮತ್ತು ಮಕ್ಕಳಿಗೆ 5 ಬೆಡ್ಗಳನ್ನು ಮುನ್ನೆಚ್ಚರಿಕಾ ಕ್ರಮವಾಗಿ ಮೀಸಲಿಡಲಾಗಿದೆ.
ಮಕ್ಕಳ ಮೇಲೆ ನಿಗಾ ವಹಿಸಲು ಪೋಷಕರಿಗೆ ಸಲಹೆ: ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಪಟಾಕಿಗಳನ್ನು ಹಿಡಿಯಲು ಅವಕಾಶ ನೀಡಬೇಡಿ ಎಂದು ಪೋಷಕರಿಗೆ ವೈದ್ಯರು ಮನವಿ ಮಾಡಿದ್ದಾರೆ. ಮಕ್ಕಳು ಪಟಾಕಿ ಸಿಡಿಸುವಾಗ ಪೋಷಕರು ಎಚ್ಚರದಿಂದಿರಬೇಕು ಮತ್ತು ಜೊತೆಯಲ್ಲಿ ಇರಬೇಕು. ಸುಲಭವಾಗಿ ಬೆಂಕಿ ಹಿಡಿಯದ ಹತ್ತಿ ಬಟ್ಟೆಗಳನ್ನು ಧರಿಸಿ ಮತ್ತು ಒಂದು ಬಕೆಟ್ ನೀರನ್ನು ಹತ್ತಿರ ಇಟ್ಟುಕೊಳ್ಳಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಕಣ್ಣಿಗೆ ಕಿಡಿ ಅಥವಾ ಚೂರು ಬಿದ್ದರೆ, ಗಾಯಗೊಂಡ ಪ್ರದೇಶವನ್ನು ಉಜ್ಜಬಾರದು ಅಥವಾ ಒತ್ತಬಾರದು ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಕಣ್ಣಿನಿಂದ ಯಾವುದೇ ವಸ್ತುವನ್ನು ತೆಗೆಯಲು ಪ್ರಯತ್ನಿಸಬಾರದು. ಅದನ್ನು ಸ್ವಚ್ಛವಾದ ಕಾಗದದ ಕಪ್ ಅಥವಾ ಬಟ್ಟೆಯಿಂದ ನಿಧಾನವಾಗಿ ಮುಚ್ಚಿ ಮತ್ತು ಕೂಡಲೇ ಹತ್ತಿರದ ಕಣ್ಣಿನ ಆಸ್ಪತ್ರೆಗೆ ಭೇಟಿ ನೀಡಬೇಕು ಎಂದು ವೈದ್ಯರು ಹೇಳಿದ್ದಾರೆ.
ಬೆಂಗಳೂರಿನಲ್ಲಿ ತುರ್ತು ಸಹಾಯವಾಣಿಗಳು: ನಗರದ ಆಸ್ಪತ್ರೆಗಳು ತುರ್ತು ಚಿಕಿತ್ಸೆಯನ್ನು ನೀಡಲು ಸಹಾಯವಾಣಿಯನ್ನು ಪ್ರಕಟಿಸಿದೆ. ಮಿಂಟೋ ಕಣ್ಣಿನ ಆಸ್ಪತ್ರೆಯ ಸಹಾಯವಾಣಿ 080-26707176/ 26706221 ಮತ್ತು ವಿಕ್ಟೋರಿಯಾ ಆಸ್ಪತ್ರೆಯ ಸಹಾಯವಾಣಿ 080-2670 1150 ಆಗಿದೆ.







