ಬೆಂಗಳೂರು | ಎರಡು ದಿನ ತರಗತಿಗೆ ಬರದಿದ್ದಕ್ಕೆ ವಿದ್ಯಾರ್ಥಿಗೆ ಚಿತ್ರಹಿಂಸೆ ಆರೋಪ; ಪ್ರಕರಣ ದಾಖಲು

ಬೆಂಗಳೂರು : ಎರಡು ದಿನ ತರಗತಿಗೆ ಬರದಿದ್ದಕ್ಕೆ ವಿದ್ಯಾರ್ಥಿಯನ್ನು ಕೊಠಡಿಯಲ್ಲಿ ಕೂಡಿಹಾಕಿ ಶಿಕ್ಷಕನೊಬ್ಬ ಪೈಪ್‍ನಿಂದ ಹೊಡೆದು ಚಿತ್ರಹಿಂಸೆ ನೀಡಿರುವ ಘಟನೆ ನಗರದ ಸುಂಕದಕಟ್ಟೆಯ ಖಾಸಗಿ ಶಾಲೆಯೊಂದಲ್ಲಿ ಇತ್ತೀಚೆಗೆ ವರದಿಯಾಗಿದೆ.
ಈ ಕೃತ್ಯದಿಂದ ಐದನೇ ತರಗತಿ ವಿದ್ಯಾರ್ಥಿ ಭಯಗೊಂಡು ನರಳಾಡುತ್ತಿದ್ದು, ಹಲ್ಲೆಗೈದ ಶಿಕ್ಷಕನ ವಿರುದ್ಧ ಪೋಷಕರು ಆಕ್ರೋಶ ಹೊರಹಾಕಿದ್ದಾರೆ ಎಂದು ತಿಳಿದುಬಂದಿದೆ.
ಸುಂಕದಕಟ್ಟೆಯಲ್ಲಿರುವ ಖಾಸಗಿ ಶಾಲೆಯಲ್ಲಿ ಓದುತ್ತಿದ್ದ ದಿವ್ಯ ದಂಪತಿ ಮಗ ಹಿಂದಿನ ವಾರ ಎರಡು ದಿನ ತರಗತಿಗೆ ಗೈರಾಗಿದ್ದಾನೆ. ಇಷ್ಟಕ್ಕೆ ಶಾಲೆಯ ಕೊಠಡಿಯಲ್ಲಿ ಕೂಡಿಹಾಕಿ ಪೈಪ್‍ನಿಂದ ಬಾಸುಂಡೆ ಬರುವಂತೆ ವಿದ್ಯಾರ್ಥಿಗೆ ಹಲ್ಲೆ ಮಾಡಲಾಗಿದೆ. ಇದರಿಂದ ವಿದ್ಯಾರ್ಥಿಯ ದೇಹದ ಕೆಲವು ಭಾಗಗಳಲ್ಲಿ ರಕ್ತ ಹೆಪ್ಪುಗಟ್ಟಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಈ ಸಂಬಂಧ ಶಾಲೆಯ ವಿರುದ್ಧ ವಿದ್ಯಾರ್ಥಿಯ ಪೋಷಕರು ನೀಡಿದ ದೂರಿನನ್ವಯ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿರುವುದಾಗಿ ಮೂಲಗಳು ತಿಳಿಸಿವೆ.





