ಬೆಂಗಳೂರು | ಸಹಜೀವನ ನಡೆಸುತ್ತಿದ್ದ ಯುವಕ-ಯುವತಿ ಆತ್ಮಹತ್ಯೆ

ಸಾಂದರ್ಭಿಕ ಚಿತ್ರ
ಬೆಂಗಳೂರು : ಖಾಸಗಿ ಕಂಪೆನಿಯೊಂದರಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಾ ಸಹಜೀವನ ನಡೆಸುತ್ತಿದ್ದ ಯುವಕ ಮತ್ತು ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತರನ್ನು ಒಡಿಶಾ ಮೂಲದ ರಾಕೇಶ್ ಪಾತ್ರ (23) ಮತ್ತು ಸೀಮಾ ನಾಯಕ್(21) ಎಂದು ಗುರುತಿಸಲಾಗಿದೆ. ಕಂಪೆನಿಯಲ್ಲಿ ಸಹೋದ್ಯೋಗಿಗಳಾಗಿದ್ದ ಈ ಜೋಡಿಯು 10 ದಿನಗಳ ಹಿಂದೆ ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಲುಬಾಳು ಪ್ರದೇಶದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದರು. ರಾಕೇಶ್ ಪ್ರತಿದಿನ ಮದ್ಯ ಕುಡಿದು ಸೀಮಾ ಜೊತೆ ಜಗಳವಾಡುತ್ತಿದ್ದ. ಅಲ್ಲದೆ, ಕುಡಿಯಲು ಹಣ ನೀಡುವಂತೆ ಪೀಡಿಸುತ್ತಿದ್ದ ಎನ್ನಲಾಗಿದೆ.
ಎರಡು ದಿನಗಳಿಂದ ಮನೆಯ ಬಾಗಿಲು ತೆರೆಯದಿರುವುದನ್ನು ಗಮನಿಸಿ ಅನುಮಾನಗೊಂಡ ಸ್ಥಳೀಯರು, ಅ.21ರ ಮುಂಜಾನೆ ಮನೆಯ ಕಿಟಕಿಯ ಮೂಲಕ ನೋಡಿದಾಗ ಇಬ್ಬರೂ ನೇಣು ಹಾಕಿಕೊಂಡಿರುವುದು ಗೊತ್ತಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸದ್ಯ ಮೃತರ ಸಂಬಂಧಿಕರಿಗೆ ಮಾಹಿತಿ ರವಾನಿಸಲಾಗಿದ್ದು, ಶವವನ್ನು ಸ್ಥಳೀಯ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ. ಈ ಸಂಬಂಧ ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.





