ಬೆಂಗಳೂರು | ಮಹಿಳೆಯನ್ನು ಹತ್ಯೆಗೈದು ಆಟೋದಲ್ಲಿಟ್ಟು ಪರಾರಿಯಾದ ಪ್ರಕರಣ; ಇಬ್ಬರ ಬಂಧನ

ಬೆಂಗಳೂರು : ನಾಲ್ಕು ಮಕ್ಕಳನ್ನು ಹೊಂದಿದ್ದ ತಾಯಿಯನ್ನು ಹತ್ಯೆಗೈದು ಮೃತದೇಹವನ್ನು ಆಟೋದಲ್ಲಿಟ್ಟು ಪರಾರಿಯಾದ ಪ್ರಕರಣದಡಿ ಇಬ್ಬರು ಆರೋಪಿಗಳನ್ನು ಇಲ್ಲಿನ ತಿಲಕನಗರ ಠಾಣೆಯ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ಸಲ್ಮಾ(35) ಹತ್ಯೆಗೊಳಗಾದ ತಾಯಿಯಾಗಿದ್ದು, ಪ್ರಕರಣ ಸಂಬಂಧ ಸುಬ್ರಹ್ಮಣಿ(42) ಹಾಗೂ ಮತ್ತೊಬ್ಬ ಆರೋಪಿಯನ್ನು ಬಂಧಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಸಲ್ಮಾ ಅವರು ಪತಿಯನ್ನು ತೊರೆದು ಇತ್ತೀಚೆಗೆ ರಾಗಿಗುಡ್ಡದ ಬಳಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಇವರಿಗೆ ಸುಬ್ರಹ್ಮಣಿ ಎಂಬಾತನ ಪರಿಚಯವಾಗಿ ಸಲುಗೆಯಿಂದ ಇದ್ದರು. ಈ ನಡುವೆ ಅ.23ರ ರಾತ್ರಿ ಆರೋಪಿಗಳು ಮನೆಯಲ್ಲಿ ಸಲ್ಮಾ ಅವರನ್ನು ಹತ್ಯೆಗೈದು ಮನೆ ಸಮೀಪದ ರಸ್ತೆ ಬದಿಯಲ್ಲಿ ಸುಮಾರು ಎರಡು ವರ್ಷಗಳಿಂದ ನಿಲ್ಲಿಸಿದ್ದ ಆಟೋದಲ್ಲಿ ಮೃತದೇಹವನ್ನಿಟ್ಟು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂಬಂಧ ಮಾಹಿತಿ ತಿಳಿದ ತಿಲಕನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ಆ ರಸ್ತೆಗಳಲ್ಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತಿರುವುದಾಗಿ ಮೂಲಗಳು ತಿಳಿಸಿವೆ.
ಪ್ರಾಥಮಿಕ ಹಂತದಲ್ಲಿ ಸಲ್ಮಾಳ ನಡತೆ ವಿಚಾರದಲ್ಲಿ ಜಗಳವಾಗಿ ಆರೋಪಿ ಸುಬ್ರಹ್ಮಣಿ ಹಾಗೂ ಆತನ ಸ್ನೇಹಿತ ಸೇರಿಕೊಂಡು ಸಲ್ಮಾ ತಲೆಗೆ ಮಾರಕಾಸ್ತ್ರದಿಂದ ಹೊಡೆದು ಹತ್ಯೆ ಮಾಡಿದ್ದಾರೆ ಎಂದು ಶಂಕಿಸಲಾಗಿದೆ.







