ಹೆಬ್ಬಾಳ ವಿಧಾನಸಭಾ ಕ್ಷೇತ್ರ | ಮತಗಳ್ಳತನ ತಡೆಗೆ ʼಕೈʼ ಕಾರ್ಯಪಡೆ : ಬೈರತಿ ಸುರೇಶ್

ಬೈರತಿ ಸುರೇಶ್
ಬೆಂಗಳೂರು : ದೇಶದಾದ್ಯಂತ ತೀವ್ರ ವಿವಾದಕ್ಕೆ ಗ್ರಾಸವಾಗಿರುವ ಮತಗಳ್ಳತನ(ವೋಟ್ ಚೋರಿ) ಪ್ರಕರಣಗಳನ್ನು ಪತ್ತೆ ಮಾಡಲು ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪಡೆಯನ್ನು ರಚಿಸುವುದಾಗಿ ಕ್ಷೇತ್ರದ ಶಾಸಕರೂ ಆಗಿರುವ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.
ಸೋಮವಾರ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಸುಲ್ತಾನ್ ಪಾಳ್ಯ ಮುಖ್ಯ ರಸ್ತೆ, ಗಂಗಾನಗರದ 1ನೇ ಮುಖ್ಯ ರಸ್ತೆ ಮತ್ತು ಆನಂದನಗರದ ಏಟ್ರಿಯಾ ಕಾಲೇಜ್ ರಸ್ತೆಗಳಿಗೆ ಸುಮಾರು 3 ಕೋಟಿ ರೂಪಾಯಿ ವೆಚ್ಚದಲ್ಲಿ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
2023ರ ವಿಧಾನಸಭೆ ಚುನಾವಣೆಯಲ್ಲಿ ಹೆಬ್ಬಾಳ ಕ್ಷೇತ್ರದಲ್ಲಿಯೂ ಮತಗಳ್ಳತನ ಆಗಿದೆ. ಸುಮಾರು 20 ಸಾವಿರಕ್ಕೂ ಅಧಿಕ ಜನರು ಕ್ಷೇತ್ರದಲ್ಲಿ ವಾಸ ಮಾಡದಿದ್ದರೂ ಬೆಂಗಳೂರು ಹೊರವಲಯದಿಂದ ಚುನಾವಣೆ ದಿನ ಬಂದು ಮತ ಚಲಾಯಿಸಿ ಹೋಗಿರುವ ಬಗ್ಗೆ ಮಾಹಿತಿ ಇದೆ. ಈ ಹಿನ್ನೆಲೆಯಲ್ಲಿ ಮುಂಬರುವ ಗ್ರೇಟರ್ ಬೆಂಗಳೂರು ಪಾಲಿಕೆ ಮತ್ತು ವಿಧಾಸನಭೆ ಚುನಾವಣೆಯಲ್ಲಿ ಈ ಮತಗಳ್ಳತನ ಮರುಕಳಿಸದಂತೆ ಎಚ್ಚರಿಕೆ ವಹಿಸಲು ಈಗಿನಿಂದಲೇ ನಮ್ಮ ಕಾಂಗ್ರೆಸ್ ಪಕ್ಷದ ವತಿಯಿಂದ ಕಾರ್ಯಪಡೆಯನ್ನು ರಚಿಸಲಾಗುವುದು ಎಂದು ಅವರು ಘೋಷಿಸಿದರು.
ಕಾರ್ಯಪಡೆ ಕಾರ್ಯವ್ಯಾಪ್ತಿ: ಇಡೀ ಹೆಬ್ಬಾಳ ವಿಧಾನಸಭಾ ಕ್ಷೇತ್ರವ್ಯಾಪ್ತಿಯಲ್ಲಿನ ಪ್ರತಿ ವಾರ್ಡ್ ಗಳಿಗೆ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರ ಕಾರ್ಯಪಡೆ ಇರಲಿದ್ದು, ಇವುಗಳ ಸದಸ್ಯರು ತಮ್ಮ ವಾರ್ಡ್ ಗಳಿಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದಿಂದಲೇ ಖಚಿತ ಮತ ಪಟ್ಟಿಯನ್ನು ಪಡೆಯಲಿದ್ದಾರೆ. ಇದರ ಆಧಾರದಲ್ಲಿ ಪ್ರತಿ ಮನೆಗೆ ಭೇಟಿ ನೀಡಿ ಮೂಲ ಮತದಾರರು ಆ ಮನೆಗಳಲ್ಲಿ ವಾಸಿಸುತ್ತಿದ್ದಾರೆಯೇ ಇಲ್ಲವೇ? ಎಂಬುದನ್ನು ಪತ್ತೆ ಮಾಡಲಿದ್ದಾರೆ ಎಂದು ಸುರೇಶ್ ಹೇಳಿದರು.
ಆಯೋಗಕ್ಕೆ ಅನರ್ಹರ ಪಟ್ಟಿ: ಹೀಗೆ ಪತ್ತೆ ಮಾಡಲಾದ ಪಟ್ಟಿಯನ್ನು ಮತ್ತೊಮ್ಮೆ ಪರಿಶೀಲನೆ ಮಾಡಿ ಅನರ್ಹ ಮತದಾರರ ಪಟ್ಟಿಯನ್ನು ತಯಾರಿಸಲಾಗುತ್ತದೆ. ಈ ಪಟ್ಟಿಯನ್ನು ಸಕಾಲಕ್ಕೆ ಚುನಾವಣೆ ಆಯೋಗಕ್ಕೆ ಸಲ್ಲಿಸಿ ಅನರ್ಹರನ್ನು ಮತ ಪಟ್ಟಿಯಿಂದ ಕೈಬಿಡುವಂತೆ ಮನವಿ ಮಾಡಲಾಗುತ್ತದೆ ಎಂದು ಅವರು ವಿವರಣೆ ನೀಡಿದರು.
ಈ ಪ್ರಕ್ರಿಯೆ ನಿರಂತರವಾಗಿ ನಡೆಯಲಿದ್ದು, ಸದ್ಯದಲ್ಲೆ ವಾರ್ಡ್ ಗಳಿಗೆ ಕಾರ್ಯಪಡೆಗಳ ಸದಸ್ಯರನ್ನು ನೇಮಕ ಮಾಡಲಾಗುತ್ತದೆ. ಇದು ಕೇವಲ ಮತಗಳ್ಳತನ ಪ್ರಕರಣಗಳನ್ನು ಪತ್ತೆ ಮಾಡುವುದಷ್ಟೇ ಅಲ್ಲ. ಮತದಾನದ ಹಕ್ಕಿನ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಕಾರ್ಯಪಡೆಯೂ ಆಗಿರುತ್ತದೆ ಎಂದು ಸುರೇಶ್ ಸ್ಪಷ್ಟಪಡಿಸಿದರು.
ಮಳೆ ಬಿಡುವು ನೀಡಿದ್ದು, ಕ್ಷೇತ್ರದ ವ್ಯಾಪ್ತಿಯಲ್ಲಿ ರಸ್ತೆಗಳ ಗುಂಡಿ ಮುಚ್ಚುವ ಕಾರ್ಯ ಮತ್ತು ರಸ್ತೆಗಳಿಗೆ ಡಾಂಬರೀಕರಣಗೊಳಿಸುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಉದ್ಯಾನವನಗಳ ನವೀಕರಣ, ಒಳಚರಂಡಿ ದುರಸ್ತಿ ಸೇರಿದಂತೆ ಇನ್ನಿತರ ಕಾಮಗಾರಿಗಳನ್ನು ಹಂತಹಂತವಾಗಿ ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದರು.







