ವಿದೇಶಿಗರ ಮೆಚ್ಚುಗೆಗೆ ಪಾತ್ರವಾದ ‘ಕೂಸಿನ ಮನೆ’: ಪ್ರಿಯಾಂಕ್ ಖರ್ಗೆ

ಬೆಂಗಳೂರು : ಒಂದು ಯೋಜನೆಯು ಯಶಸ್ವಿ ಎನಿಸಿಕೊಳ್ಳಬೇಕಾದರೆ ಅದರ ಪ್ರಯೋಜನಗಳು ಹಲವು ಆಯಾಮಗಳಲ್ಲಿ ಜನತೆಗೆ ದೊರಕಬೇಕು. ಇಂತಹ ಬಹುಪಯೋಗಿ ಯೋಜನೆಯೇ ʼಕೂಸಿನ ಮನೆʼ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಸೋಮವಾರ ಈ ಸಂಬಂಧ ಸಾಮಾಜಿಕ ಜಾಲತಾಣ ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿರುವ ಅವರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕನ್ನಮಂಗಲ ಮತ್ತು ಕಾರಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೂಸಿನ ಮನೆ ಕೇಂದ್ರಕ್ಕೆ ಸ್ವಿಟ್ಜರ್‍ಲ್ಯಾಂಡ್‌ನ ಕಾರ್ಟೀಯಾರ್ ಕಂಪನಿಯ ಪ್ರತಿನಿಧಿಗಳು ಇತ್ತೀಚೆಗೆ ಭೇಟಿ ನೀಡಿದ್ದು, ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕಾಗಿ ಜಾರಿಗೊಳಿಸಿದ ಈ ವ್ಯವಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.
ಗ್ರಾಮೀಣ ಪ್ರದೇಶದ ಕಾರ್ಮಿಕ ಮಹಿಳೆಯರ ಮಕ್ಕಳ ಆರೈಕೆಗಾಗಿ ಇರುವ ‘ಕೂಸಿನ ಮನೆ' ಕಳೆದ ಎರಡು ವರ್ಷಗಳಲ್ಲಿ ಗಮನಾರ್ಹ ಬದಲಾವಣೆಗಳಿಗೆ ಕಾರಣವಾಗಿದೆ. ಈ ಭಾಗದ ಮಹಿಳೆಯರ ದುಡಿಯುವ ಕನಸಿಗೆ ‘ಕೂಸಿನ ಮನೆ' ಆಸರೆ ಒದಗಿಸಿದೆ. ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಮಹಿಳೆಯರು ಸಶಕ್ತರಾಗುತ್ತಿರುವುದು ಗ್ರಾಮೀಣ ಪ್ರಗತಿಯ ಸಂಕೇತವಾಗಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಗ್ಯಾರಂಟಿ ಸರಕಾರವು ಸಮಾಜದ ಪ್ರತಿ ವರ್ಗ ಹಾಗೂ ಸಮುದಾಯವನ್ನು ಗಮನದಲ್ಲಿರಿಸಿಕೊಂಡು ಜಾರಿಗೆ ತರುವ ಯೋಜನೆಗಳು ತಮ್ಮ ಉದ್ದೇಶ ಸಾಧಿಸುವುದರೊಂದಿಗೆ, ವಿದೇಶಿಗರಿಂದಲೂ ಮೆಚ್ಚುಗೆ ಗಳಿಸುತ್ತಿರುವುದು ಸಂತಸ ತಂದಿದೆ. ಈ ಯೋಜನೆಗಳ ಯಶಸ್ಸು ನಮ್ಮ ಅಭಿವೃದ್ಧಿಪರ ನಡೆಯು ಸರಿಯಾದ ಹಾದಿಯಲ್ಲಿದೆ ಎಂಬುದನ್ನು ಸೂಚಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಒಂದು ಯೋಜನೆಯು ಯಶಸ್ವಿ ಎನಿಸಿಕೊಳ್ಳಬೇಕಾದರೆ ಅದರ ಪ್ರಯೋಜನಗಳು ಹಲವು ಆಯಾಮಗಳಲ್ಲಿ ಜನತೆಗೆ ದೊರಕಬೇಕು. ಇಂತಹ ಬಹುಪಯೋಗಿ ಯೋಜನೆಯೇ ಕೂಸಿನ ಮನೆ.
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) October 27, 2025
ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕಿನ ಕನ್ನಮಂಗಲ ಮತ್ತು ಕಾರಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೂಸಿನ ಮನೆ ಕೇಂದ್ರಕ್ಕೆ ಸ್ವಿಟ್ಜರ್ಲೆಂಡ್‌ನ ಕಾರ್ಟೀಯಾರ್ ಕಂಪನಿಯ… pic.twitter.com/5rnFfBiaAK







