ಬೆಂಗಳೂರು | ಸಾಕು ನಾಯಿಗೆ ಚಿತ್ರಹಿಂಸೆ ನೀಡಿ ಸಾಯಿಸಿದ ಆರೋಪ: ಇಬ್ಬರ ವಿರುದ್ಧ ಎಫ್‍ಐಆರ್

ಬೆಂಗಳೂರು : ದತ್ತು ಪಡೆದ ಸಾಕು ನಾಯಿಗೆ ಚಿತ್ರಹಿಂಸೆ ನೀಡಿ ಸಾಯಿಸಿದ ಆರೋಪದ ಮೇಲೆ ಇಬ್ಬರ ವಿರುದ್ಧ ಇಲ್ಲಿನ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.
ಪ್ರಾಣಿ ಕಲ್ಯಾಣ ಮಂಡಳಿ ಪದಾಧಿಕಾರಿ ಎ.ಎಸ್.ಶರತ್ ಲಾಲ್ ಎಂಬುವರು ನೀಡಿದ ದೂರಿನನ್ವಯ ಅನುಭವ್ ಕಬ್ರ ಮತ್ತು ಅವರ ಪತ್ನಿ ಕೃತಿ ಲಬ್ ಎಂಬುವರ ವಿರುದ್ಧ ಪುಟ್ಟೇನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
2021ರ ಆಗಸ್ಟ್ ನಲ್ಲಿ ಸ್ವರ್ಣಿಮಾ ನಿಶಾಂತ್ ಅವರಿಂದ ಅನುಭವ್ ಕಬ್ರ ಮತ್ತು ಕೃತಿ ಅವರು ‘ಬೊಂಗೊ’ ಹೆಸರಿನ ನಾಯಿಯನ್ನು ದತ್ತು ಪಡೆದು, ಅದರ ಪಾಲನೆ ಜವಾಬ್ದಾರಿಯನ್ನು ಮಾಡುವುದಾಗಿ ಹೇಳಿದ್ದರು. 2025ರ ಅಕ್ಟೋಬರ್ 23ರಂದು ಸ್ವರ್ಣಿಮಾ ಅವರು ಅನುಭವ್‍ಗೆ ಕರೆ ಮಾಡಿ ನಾಯಿ ಬಗ್ಗೆ ವಿಚಾರಿಸಿದಾಗ, ಅದಕ್ಕೆ ಹಿಂಸೆ ನೀಡಿ ಸಾಯಿಸಿರುವ ವಿಚಾರ ಗೊತ್ತಾಗಿದೆ ಎಂದು ಶರತ್ ಲಾಲ್ ದೂರಿನಲ್ಲಿ ತಿಳಿಸಿದ್ದಾರೆ.
ನಾಯಿಗೆ ಹಿಂಸೆ ನೀಡಿದ್ದಲ್ಲದೇ, ಅದನ್ನು ಬಿಸಾಡಿದ ಜಾಗದಲ್ಲಿನ ಜನರಿಗೂ ತೊಂದರೆ ಉಂಟು ಮಾಡಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ, ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.
ಈ ಸಂಬಂಧ ಅನುಭವ್ ಕಬ್ರ ಮತ್ತು ಕೃತಿ ಲಬ್ ಅವರಿಗೆ ನೋಟಿಸ್ ನೀಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.





