ಸಂತ ಶಿಶುನಾಳ ಶರೀಫ-ಗುರು ಗೋವಿಂದ ಭಟ್ಟ ದತ್ತಿ ಪ್ರಶಸ್ತಿಗೆ ಶ್ರೀಹರಿ ಖೋಡೆ ಆಯ್ಕೆ

ಸಾಂದರ್ಭಿಕ ಚಿತ್ರ
ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ನಲ್ಲಿ ಹೊಸದಾಗಿ ಸ್ಥಾಪಿತವಾಗಿರುವ ಸಂತ ಶಿಶುನಾಳ ಶರೀಫ ಮತ್ತು ಗುರು ಗೋವಿಂದ ಭಟ್ಟರ ದತ್ತಿ ಪ್ರಶಸ್ತಿಗೆ ಯಜಮಾನ್ ಎಂಟರ್ ಪ್ರೈಸಸ್ನ ಶ್ರೀಹರಿ ಖೋಡೆ ಆಯ್ಕೆಯಾಗಿದ್ದಾರೆ.
ಹಾವೇರಿಯಲ್ಲಿ ನಡೆದ 86ನೇ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪಿಗಾಗಿ ಸಮ್ಮೇಳನಾಧ್ಯಕ್ಷ ಡಾ.ದೊಡ್ಡರಂಗೇಗೌಡರ ಹೆಸರಿನಲ್ಲಿ ಒಂದು ದತ್ತಿ ಪ್ರಶಸ್ತಿ ಮತ್ತು ಜಾತಿ ಮತಗಳ ಮೀರಿ ಸೌಹಾರ್ದ ಸಾರಿದ ಸಂತ ಶಿಶುನಾಳ ಶರೀಫರ ಗುದ್ದುಗೆ ಹಾವೇರಿ ಜಿಲ್ಲೆಯಲ್ಲಿಯೇ ಇರುವುದರಿಂದ ಸಂತ ಶಶಿನಾಳ ಶರೀಫರು ಮತ್ತು ಅವರ ಗುರುಗಳಾದ ಗೋವಿಂದ ಭಟ್ಟರನ್ನು ಜೊತೆಯಾಗಿ ನೆನಪಿಸಿ ಕೊಳ್ಳುವ ವಾಡಿಕೆಯ ಜೊತೆಗೆ ಅದೊಂದು ಪರಂಪರೆ ಕೂಡ ಆಗಿರುವುದರಿಂದ ‘ಸಂತ ಶಿಶುನಾಳ ಶರೀಫ ಮತ್ತು ಗುರು ಗೋವಿಂದ ಭಟ್ಟ ದತ್ತಿ’ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ.
ಶ್ರೀಹರಿ ಖೋಡೆ ಅವರು ದೇಶ-ವಿದೇಶಗಳಲ್ಲಿ ಮನ್ನಣೆ ಪಡೆದ ಉದ್ಯಮಿಯಾಗಿದ್ದಾರೆ. ಅವರು ಅನೇಕ ಕ್ಷೇತ್ರದಲ್ಲಿ ಆಸಕ್ತರು, ಅಧ್ಯಾತ್ಮ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿಯೂ ಸಕ್ರಿಯರಾಗಿರುವ ಅವರು ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಬರೆದಿದ್ದು ನಾಡಿನ ಪ್ರಖ್ಯಾತ ಗಾಯಕರು ಅವುಗಳನ್ನು ಹಾಡಿದ್ದಾರೆ. ‘ಸಂತ ಶಿಶುನಾಳ ಶರೀಫ’ ಚಿತ್ರದ ಮೂಲ ಸಂತ ಶಿಶುನಾಳ ಶರೀಫರ ಜೀವನ ಮತ್ತು ಸಾಧನೆಯನ್ನು ಜನಮನಕ್ಕೆ ತಲುಪಿಸಿದ ಶ್ರೀಹರಿ ಖೋಡೆ, ‘ಈಶ್ವರ ಅಲ್ಲಾ ನೀನೆ ಎಲ್ಲಾ’ ಎಂಬ ಧಾರವಾಹಿಯನ್ನೂ ಕೂಡ ಇದೇ ವಸ್ತುವಿನ ಕುರಿತು ದೂರದರ್ಶನಕ್ಕಾಗಿ ನಿರ್ಮಿಸಿದ್ದರು.
ಕಸಾಪ ಅಧ್ಯಕ್ಷ ಮಹೇಶ ಜೋಶಿ ಅವರ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಆಯ್ಕೆ ಮಂಡಳಿ ಸಭೆಯಲ್ಲಿ ಬಿ.ಎಂ.ಪಟೇಲ್ ಪಾಂಡು, ಎಚ್.ಬಿ.ಮದನ್ಗೌಡ, ಡಿ.ಆರ್.ವಿಜಯ್ ಕುಮಾರ್, ಲಿಂಗಯ್ಯ.ಬಿ.ಹಿರೇಮಠ ಅವರು ಭಾಗವಹಿಸಿ ಸರ್ವಾನುಮತದಿಂದ ಶ್ರೀಹರಿ ಖೋಡೆ ಅವರನ್ನು ಸಂತ ಶಿಶುನಾಳ ಶರೀಫ ಮತ್ತು ಗುರು ಗೋವಿಂದ ಭಟ್ಟರ ದತ್ತಿ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.







