‘ಇಂದಿರಾ ಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರದಲ್ಲಿ ಹಗರಣ’ ಆರೋಪ ಸತ್ಯಕ್ಕೆ ದೂರ : ಎಚ್.ಸಿ.ಮಹದೇವಪ್ಪ

ಬೆಂಗಳೂರು : ಇಂದಿರಾ ಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರದಲ್ಲಿ 125ಕೋಟಿ ರೂ. ಹಗರಣ ನಡೆದಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದು, ಇದು ಸತ್ಯಕ್ಕೆ ದೂರವಾದ ಸಂಗತಿಯಾಗಿದೆ. ಮಾಧ್ಯಮಗಳ ಮೂಲಕ ತಪ್ಪಾದ ವಿವರಗಳನ್ನು ಸಾರ್ವಜನಿಕರಿಗೆ ನೀಡುವ ಪ್ರಯತ್ನ ಮಾಡಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸ್ಪಷ್ಟನೆ ನೀಡಿದ್ದಾರೆ.
ಮಂಗಳವಾರ ಪ್ರಕಟನೆ ಹೊರಡಿಸಿರುವ ಅವರು, 2024-25ನೆ ಸಾಲಿಗೆ ಅನುಮೋದನೆಯಾಗಿರುವ ಕ್ರಿಯಾ ಯೋಜನೆಯ ಮೊತ್ತ 154.61 ಕೋಟಿ ಆಗಿರುತ್ತದೆ. ಈ ಪೈಕಿ ಪ್ರಬುದ್ಧ ಯೋಜನೆಗೆ 70 ಕೋಟಿ ರೂ ಖರ್ಚಾಗಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ 28.84 ಕೋಟಿ ರೂ. ಖರ್ಚಾಗಿದೆ. ಐಇಸಿ ಪ್ರಚಾರ ಕೆಲಸಗಳಿಗೆ 99 ಲಕ್ಷ ರೂ. ಖರ್ಚು ಮಾಡಲಾಗಿದ್ದು, ಕಚೇರಿಯ ಆಡಳಿತಾತ್ಮಕ ವೆಚ್ಚವು 2.79 ಕೋಟಿ ರೂ. ಆಗಿದೆ ಎಂದು ವಿವರಿಸಿದ್ದಾರೆ.
ಇನ್ನು 32.03 ಕೋಟಿಗಳ ರೂ. ವೆಚ್ಚದಲ್ಲಿ ಡ್ರೋನ್ ತರಬೇತಿ, ಪಿಎಸ್‍ಐ ತರಬೇತಿ, ಪಿಸಿ ತರಬೇತಿ, ಡ್ರೋನ್ ಅಡ್ವಾನ್ಸ್, ಮಲ್ಟಿ ಮೀಡಿಯಾ ಸೇವೆಗಳ ತರಬೇತಿ, ಪದವಿ ಓದುವ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ, ಕೈಗಾರಿಕಾ ತರಬೇತಿ, ಪ್ಯಾರಾ ಮೆಡಿಕಲ್, ತರಬೇತಿಯ ಅಡಿಯಲ್ಲಿ ಸುಮಾರು 5645 ಅಭ್ಯರ್ಥಿಗಳು ಅನುಕೂಲ ಪಡೆದುಕೊಂಡಿದ್ದಾರೆ. ಉಳಿಕೆಯಾಗಿದ್ದ 19.96 ಕೋಟಿ ರೂ.ಗಳನ್ನು ಪ್ರಬುದ್ಧ ಯೋಜನೆಗೆ ಬಳಕೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ಪರಿಶಿಷ್ಟ ಸಮುದಾಯದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ನಮ್ಮ ಸರಕಾರ ಶ್ರಮಿಸುತ್ತಿರುವ ಕಾರಣದಿಂದಾಗಿಯೇ ಸುಮಾರು 10 ಸಾವಿರಕ್ಕಿಂತ ಹೆಚ್ಚಿನ ಅಭ್ಯರ್ಥಿಗಳಿಗೆ ಅನುಕೂಲವಾಗಿದೆ. ಇನ್ನು ಆರೋಪ ಮಾಡುತ್ತಿರುವ ಜನರಿಗೆ ಸ್ಪರ್ಧಾತ್ಮಕ ತರಬೇತಿಗೆ ಎಷ್ಟು ಹಣವನ್ನು ನಿಗದಿ ಪಡಿಸಲಾಗಿದೆ ಎಂಬ ಮಾಹಿತಿಯೇ ಇಲ್ಲ ಎಂದು ಅವರು ಹೇಳಿದ್ದಾರೆ.
ಕೆಟಿಪಿಪಿ ಟೆಂಡರ್ ದಾಖಲೆಯ ನಿಯಮಾವಳಿಗಳ ಪ್ರಕಾರವೇ ಅರ್ಹ ಸಂಸ್ಥೆಗಳಿಗೆ ಮಾತ್ರ ಟೆಂಡರ್ ನೀಡಲಾಗಿದ್ದು, ಟೆಂಡರ್‍ನ ನಿಯಮಾವಳಿಗಳನ್ನು ಸರಿಯಾಗಿ ತಿಳಿಯದೇ ಯಾರೋ ಪಟ್ಟಭದ್ರ ಹಿತಾಸಕ್ತಿಗಳು ಮಾಡಿರುವ ಆಧಾರ ರಹಿತವಾದ ಆರೋಪಗಳನ್ನು ಆಧರಿಸಿ ಸುದ್ಧಿಯನ್ನು ಪ್ರಕಟಿಸಲಾಗಿದೆ. ಮಾಧ್ಯಮಗಳು ಸರಿಯಾದ ಅಂಶಗಳನ್ನು ಪರಿಶೀಲನೆ ಮಾಡಿ ಸುದ್ದಿಯನ್ನು ಪ್ರಕಟಿಸುವ ಜವಾಬ್ದಾರಿ ತೋರಬೇಕು ಎಂದು ಡಾ. ಎಚ್.ಸಿ. ಮಹದೇವಪ್ಪ ಹೇಳಿದ್ದಾರೆ.
ಇನ್ನು ಲೋಕಾಯುಕ್ತಕ್ಕೆ ನನ್ನ ವಿರುದ್ಧ ರಾಜಕೀಯ ಪ್ರೇರಿತವಾಗಿ ಮತ್ತು ಸಲ್ಲದ ಕಾರಣಗಳಿಗೆ ದೂರನ್ನು ಸಲ್ಲಿಸಲಾಗಿದೆ. ಆದರೆ ಎಲ್ಲವೂ ನಿಯಮಾವಳಿಗಳ ಪ್ರಕಾರವೇ ಜರುಗಿದೆ. ನಮ್ಮ ಇಲಾಖೆಯ ವತಿಯಿಂದ ಸುಮಾರು ಹತ್ತು ಸಾವಿರಕ್ಕೂ ಹೆಚ್ಚಿನ ಉದ್ಯೋಗಾಕಾಂಕ್ಷಿ ಅಭ್ಯರ್ಥಿಗಳಿಗೆ ಪ್ರಯೋಜನ ಆಗಿದ್ದು, ಹಗರಣ ಮಾಡುತ್ತಾ ಕುಳಿತಿದ್ದರೆ ಇಷ್ಟು ಮಂದಿಗೆ ಪ್ರಯೋಜನ ಆಗುತ್ತಿತ್ತೇ ಎಂದು ಅವರು ಪ್ರಶ್ನಿಸಿದ್ದಾರೆ.
‘ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದಂತೆ ತರಬೇತಿ ನೀಡುವ ಹಲವು ಸಂಸ್ಥೆಗಳು ಇದ್ದು, ಟೆಂಡರ್ ದೊರೆಯದ ಕೆಲವು ಸಂಸ್ಥೆಗಳು ಈ ರೀತಿಯಾಗಿ ಅಪಪ್ರಚಾರ ಮಾಡುವ ಕೆಲಸದಲ್ಲಿ ತೊಡಗಿವೆ. ಅಂತವರ ಮೇಲೆ ಮಾನನಷ್ಟ ಮೊಕದ್ದಮೆ ಅನ್ನು ದಾಖಲಿಸಲಾಗುವುದು. ಮುಖ್ಯವಾಗಿ ಪರಿಶಿಷ್ಟರ ಅಭಿವೃದ್ಧಿಯಲ್ಲಿ ಬದ್ಧತೆ ಹೊಂದಿ ಕೆಲಸ ಮಾಡುತ್ತಿರುವ ಸರಕಾರವು ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯ ವಿಷಯದಲ್ಲಿ ಸ್ಪಷ್ಟತೆಯಿಂದ ಕೆಲಸ ಮಾಡುತ್ತಿದೆ. ಇಂತಹ ಸುಳ್ಳು ಆರೋಪಗಳಿಗೆ ತಲೆ ಕೆಡಿಸಿಕೊಳ್ಳುವ ಪ್ರಶ್ನೆ ಇಲ್ಲ’
-ಡಾ.ಎಚ್.ಸಿ.ಮಹದೇವಪ್ಪ, ಸಮಾಜ ಕಲ್ಯಾಣ ಸಚಿವ







