ದ್ವಿತೀಯ ಪಿಯುಸಿ ಪರೀಕ್ಷೆ: ಲಿಖಿತ ಪರೀಕ್ಷೆಯಲ್ಲಿ ಕನಿಷ್ಠ ಅಂಕ ನಿಗಧಿ

ಸಾಂದರ್ಭಿಕ ಚಿತ್ರ
ಬೆಂಗಳೂರು : ದ್ವಿತೀಯ ಪಿಯುಸಿ ಪರೀಕ್ಷೆಗೆ ಸಂಬಂಧಿಸಿ ಪ್ರಾಯೋಗಿಕ ಪರೀಕ್ಷೆ ಇಲ್ಲದ ವಿಷಯಗಳಿಗೆ ಲಿಖಿತ ಪರೀಕ್ಷೆಯಲ್ಲಿ ಕನಿಷ್ಠ 24 ಅಂಕಗಳನ್ನು ಪ್ರಾಯೋಗಿಕ ಪರೀಕ್ಷೆ ಇರುವ ವಿಷಯಗಳಿಗೆ ಲಿಖಿತ ಪರೀಕ್ಷೆಯಲ್ಲಿ ಕನಿಷ್ಠ 21 ಅಂಕಗಳನ್ನು ಪಡೆಯುವುದು ಕಡ್ಡಾಯ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸ್ಪಷ್ಟಪಡಿಸಿದೆ.
ಮಂಗಳವಾರದಂದು ಆದೇಶ ಹೊರಡಿಸಿದ್ದು, ಪ್ರಾಯೋಗಿಕ ಪರೀಕ್ಷೆ ಇಲ್ಲದ ವಿಷಯಗಳಿಗೆ ಪ್ರಶ್ನೆಪತ್ರಿಕಾ ವಿನ್ಯಾಸ, ನೀಲಿನಕ್ಷೆ ಹಾಗು ಪ್ರಶ್ನೆ ಪತ್ರಿಕೆಗಳನ್ನು ಗರಿಷ್ಠ 80 ಅಂಕಗಳಿಗೆ ಸಿದ್ಧಪಡಿಸಲಾಗುತ್ತದೆ. ಪ್ರತಿ ವಿಷಯದ ಲಿಖಿತ ಪರೀಕ್ಷೆಯಲ್ಲಿ ಗರಿಷ್ಠ 80 ಅಂಕಗಳಿಗೆ, ಕನಿಷ್ಠ 24 ಅಂಕಗಳನ್ನು ಪಡೆಯುವುದು ಕಡ್ಡಾಯವಾಗಿರುತ್ತದೆ. ಆಂತರಿಕ ಮೌಲ್ಯಮಾಪನಕ್ಕೆ ಗರಿಷ್ಠ 20 ಅಂಕಗಳಿದ್ದು, ಇದಕ್ಕೆ ಯಾವುದೇ ಕನಿಷ್ಠ ಅಂಕಗಳ ಮಿತಿಯನ್ನು ನಿಗದಿಪಡಿಸಿರುವುದಿಲ್ಲ ಎಂದು ಹೇಳಿದೆ.
ಆದರೆ ಆಂತರಿಕ ಅಂಕಗಳೂ ಸೇರಿ ಕನಿಷ್ಠ 30 ಅಂಕಗಳನ್ನು ಪಡೆದಲ್ಲಿ ಹಾಗೂ ಎಲ್ಲ ವಿಷಯಗಳಲ್ಲಿ ಒಟ್ಟಾರೆಯಾಗಿ ಶೇ.33 ಅಂಕಗಳನ್ನು ಪಡೆದಲ್ಲಿ ಅಂತಹ ಅಭ್ಯರ್ಥಿಯನ್ನು ಉತ್ತೀರ್ಣರಾಗಿದ್ದಾರೆ ಎಂದು ಘೋಷಿಸಲಾಗುತ್ತದೆ ಎಂದು ತಿಳಿಸಿದೆ.
ಪ್ರಾಯೋಗಿಕ ಪರೀಕ್ಷೆ ಇರುವ ವಿಷಯಗಳಿಗೆ ಅನ್ವಯ: ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಗಣಕ ವಿಜ್ಞಾನ, ವಿದ್ಯುನ್ಮಾನಶಾಸ್ತ್ರ ಮತ್ತು ಗೃಹವಿಜ್ಞಾನ ವಿಷಯಗಳಿಗೆ 70 ಅಂಕಗಳ ಲಿಖಿತ ಪರೀಕ್ಷೆಯನ್ನು ಹಾಗೂ 30 ಅಂಕಗಳಿಗೆ ಪ್ರಾಯೋಗಿಕ ಪರೀಕ್ಷೆಯನ್ನು ನಿಗದಿಪಡಿಸಲಾಗಿದೆ. ಪ್ರತಿ ವಿಷಯದ ಲಿಖಿತ ಪರೀಕ್ಷೆಯಲ್ಲಿ ಗರಿಷ್ಠ 70 ಅಂಕಗಳಿಗೆ, ಕನಿಷ್ಠ 21 ಅಂಕಗಳನ್ನು ಪಡೆಯುವುದು ಕಡ್ಡಾಯವಾಗಿರುತ್ತದೆ.
ಪ್ರಾಯೋಗಿಕ ಪರೀಕ್ಷೆ ಅಂಕಗಳೂ ಸೇರಿ ಕನಿಷ್ಠ 30 ಅಂಕಗಳನ್ನು ಪಡೆದಲ್ಲಿ ಹಾಗೂ ಎಲ್ಲಾ ವಿಷಯಗಳಲ್ಲಿ ಒಟ್ಟಾರೆಯಾಗಿ ಶೇ.33 ಅಂಕಗಳನ್ನು ಪಡೆದಲ್ಲಿ ಅಂತಹ ಅಭ್ಯರ್ಥಿಯನ್ನು ಉತ್ತೀರ್ಣರಾಗಿದ್ದಾರೆ ಎಂದು ಘೋಷಿಸಲಾಗುತ್ತದೆ. ಆದರೆ ಪ್ರಾಯೋಗಿಕ ಪರೀಕ್ಷೆಗೆ ಗರಿಷ್ಠ 30 ಅಂಕಗಳಿದ್ದು, ಯಾವುದೇ ಕನಿಷ್ಠ ಅಂಕಗಳ ಮಿತಿಯನ್ನು ನಿಗದಿಪಡಿಸಿರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಇನ್ನು ಪ್ರಾಯೋಗಿಕ ಪರೀಕ್ಷೆಯಲ್ಲಿ ಗೈರಾದರೆ ಅಥವಾ ಕಡಿಮೆ ಅಂಕ ಗಳಿಸಿದರೆ ಮತ್ತೊಮ್ಮೆ ಪ್ರಾಯೋಗಿಕ ಪರೀಕ್ಷೆ ಬರೆಯಲು ಅವಕಾಶವಿರುವುದಿಲ್ಲ. ಆದರೆ ಪ್ರಸಕ್ತ ಶೈಕ್ಷಣಿಕ ಸಾಲಿನ ಲಿಖಿತ ಪರೀಕ್ಷೆಯ ಎಲ್ಲ ವಿಷಯಗಳಿಗೆ ಹಾಗು ಎಲ್ಲ ಪ್ರಾಯೋಗಿಕ ವಿಷಯಗಳ ಪರೀಕ್ಷೆಗಳಿಗೆ ಗೈರಾಗುವ ವಿದ್ಯಾರ್ಥಿಗಳಿಗೆ ಮಾತ್ರ ಮುಂದಿನ ಶೈಕ್ಷಣಿಕ ವರ್ಷದ ಪರೀಕ್ಷೆ-1 ರಲ್ಲಿ ಮಾತ್ರ ಪ್ರಾಯೋಗಿಕ ಪರೀಕ್ಷೆಗೆ ಹಾಜರಾಗಲು ಅವಕಾಶವಿರುತ್ತದೆ ಎಂದು ಹೇಳಿದೆ.
ಇನ್ನು 2023 ಮತ್ತು ಹಿಂದಿನ ಪರೀಕ್ಷೆಗಳ ಪ್ರಾಯೋಗಿಕ ಪರೀಕ್ಷೆ ಇಲ್ಲದ ವಿಷಯಗಳಲ್ಲಿ ಅನುತ್ತೀರ್ಣರಾಗಿ 2026ರ ಪರೀಕ್ಷೆಗಳಿಗೆ ಪುನರಾವರ್ತಿತ ಅಭ್ಯರ್ಥಿಗಳಾಗಿ ಪರೀಕ್ಷೆ ಬರೆದಲ್ಲಿ, ಅಭ್ಯರ್ಥಿಗಳು, ಲಿಖಿತ ಪರೀಕ್ಷೆಯಲ್ಲಿ 80 ಅಂಕಗಳಿಗೆ ಗಳಿಸಿದ ಅಂಕಗಳನ್ನು 100 ಅಂಕಗಳಿಗೆ ಉನ್ನತೀಕರಿಸಿ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ. ಖಾಸಗಿ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಯಲ್ಲಿ ಪ್ರತಿ ವಿಷಯದಲ್ಲಿ 80 ಅಂಕಗಳಿಗೆ ಗಳಿಸಿದ ಅಂಕಗಳನ್ನು 100 ಅಂಕಗಳಿಗೆ ಉನ್ನತೀಕರಿಸಿ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ ಎಂದು ಮಂಡಳಿಯು ತಿಳಿಸಿದೆ.







