ಬೆಂಗಳೂರಿನ ರಸ್ತೆ ಡಾಂಬರೀಕರಣದ ಕ್ರಿಯಾ ಯೋಜನೆಗೆ ಅನುಮೋದನೆ

ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿರುವ ಐದು ನಗರ ಪಾಲಿಕೆಗಳಲ್ಲಿನ ಮುಖ್ಯ ಮತ್ತು ಉಪರಸ್ತೆಗಳ ಡಾಂಬರೀಕರಣ ಕಾಮಗಾರಿಗಳನ್ನು ಕೈಗೊಳ್ಳಲು 1241.57 ಕೋಟಿ ರೂ.ಗಳ ಮೊತ್ತದ ಕ್ರಿಯಾ ಯೋಜನೆಗೆ ರಾಜ್ಯ ಸರಕಾರವು ಸೋಮವಾರದಂದು ಅನುಮೋದನೆ ನೀಡಿದೆ.
ಇದನ್ನು ಹೊರತುಪಡಿಸಿ, ಐದು ನಗರ ಪಾಲಿಕೆಗಳ ವ್ಯಾಪ್ತಿಯ ವಾರ್ಡ್ ಅಭಿವೃದ್ಧಿ, ಚರಂಡಿ ಅಭಿವೃದ್ಧಿ, ನಿರ್ವಹಣೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗಾಗಿ ಕಾಮಗಾರಿ ಕೈಗೊಳ್ಳಲು 900 ಕೋಟಿ ರೂ.ಗಳ ಮೊತ್ತದ ಕ್ರಿಯಾಯೋಜನೆಗೆ ಪ್ರತ್ಯೇಕವಾಗಿ ಅನುಮೋದನೆ ನೀಡಿದೆ.
ಈ ಕಾಮಗಾರಿಗಳನ್ನು 10 ಕೋಟಿ ರೂ.ಗಳಿಗೆ ಕಡಿಮೆ ಇರದಂತೆ ಪ್ಯಾಕೇಜ್ ಮಾಡಿ, ಪ್ಯಾಕೇಜ್ ಕಾಮಗಾರಿಗಳನ್ನು ಕೆ.ಟಿ.ಪಿ.ಪಿ. ಕಾಯ್ದೆ-1999 ಮತ್ತು ಕೆ.ಟಿ.ಪಿ.ಪಿ ನಿಯಮಗಳು-2000 ಹಾಗೂ ಕೆಪಿಪಿಪಿ ಪೋರ್ಟಲ್ ಮುಖಾಂತರ ಅಲ್ಪಾವಧಿ ಟೆಂಡರ್ ಕೈಗೊಳ್ಳಬೇಕು.
ಕ್ರಿಯಾ ಯೋಜನೆಯಲ್ಲಿ ಅನುಷ್ಠಾನಗೊಳಿಸಬೇಕಿರುವ ಕಾಮಗಾರಿಗಳನ್ನು ಅನಿವಾರ್ಯ ಮತ್ತು ಅನಿಯಂತ್ರಿತ ಕಾರಣಗಳಿಂದಾಗಿ ಬದಲಿಸಿ ಅನುಷ್ಠಾನಗೊಳಿಸಬೇಕಾದಲ್ಲಿ ಮುಖ್ಯ ಆಯುಕ್ತರ ಸ್ಪಷ್ಟ ಶಿಫಾರಸ್ಸಿನ ಮೇರೆಗೆ ಇಲಾಖಾ ಸಚಿವರ ಅನುಮೋದನೆ ಪಡೆದುಕೊಂಡು ಅನುಷ್ಠಾನಗೊಳಿಸಬೇಕು ಎಂದು ಹೇಳಿದೆ.







