ಬೆಂಗಳೂರು | ಅರಣ್ಯ ಇಲಾಖೆ ಹುದ್ದೆಗಳಿಗೆ ಬಿಎಸ್ಸಿ ಅರಣ್ಯಶಾಸ್ತ್ರ ಕನಿಷ್ಠ ವಿದ್ಯಾರ್ಹತೆಯನ್ನಾಗಿಸಲು ಆಗ್ರಹಿಸಿ ಧರಣಿ ಸತ್ಯಾಗ್ರಹ

ಬೆಂಗಳೂರು : ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ವಲಯ ಅರಣ್ಯಾಧಿಕಾರಿ, ಉಪವಲಯ ಅರಣ್ಯಾಧಿಕಾರಿ ಹುದ್ದೆ ನೇಮಕಾತಿಯಲ್ಲಿ ಬಿಎಸ್ಸಿ ಅರಣ್ಯಶಾಸ್ತ್ರವನ್ನೆ ಕನಿಷ್ಠ ವಿದ್ಯಾರ್ಹತೆಯನ್ನಾಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ, ನಗರದ ಫ್ರೀಡಂ ಪಾರ್ಕ್‍ನಲ್ಲಿ ‘ಕರ್ನಾಟಕ ಅರಣ್ಯಶಾಸ್ತ್ರ ವಿದ್ಯಾರ್ಥಿಗಳು ಮತ್ತು ಪದವೀಧರರ ಅಸೋಸಿಯೇಶನ್’ ವತಿಯಿಂದ ಧರಣಿ ಸತ್ಯಾಗ್ರಹ ನಡೆಸಲಾಯಿತು.
ಕೃಷಿ, ತೋಟಗಾರಿಕೆ, ಪಶು ವೈದ್ಯಕೀಯ ಹಾಗೂ ಮೀನುಗಾರಿಕೆ ಇಲಾಖೆಗಳು ಸೇರಿ ಇತರೆ ಇಲಾಖೆಗಳ ಹುದ್ದೆಗಳಿಗೆ ಅದರದ್ದೇ ಆದ ವೃತ್ತಿಪರ ಪದವಿಗಳು ಕನಿಷ್ಠ ವಿದ್ಯಾರ್ಹತೆಯಾಗಿದ್ದು, ಅರಣ್ಯ ಇಲಾಖೆಯ ಹುದ್ದೆಗಳಿಗೂ ಕೂಡ ಬಿಎಸ್ಸಿ ಅರಣ್ಯಶಾಸ್ತ್ರ ಪದವಿಯನ್ನು ಕನಿಷ್ಠ ವಿದ್ಯಾರ್ಹತೆಯನ್ನಾಗಿಸಬೇಕು ಎಂದು ಧರಣಿನಿರತ ವಿದ್ಯಾರ್ಥಿಗಳು ಆಗ್ರಹಿಸಿದರು.
ಅಸಮಂಜಸ ಹಾಗೂ ಅವೈಜ್ಞಾನಿಕ ಕಾರಣಗಳನ್ನು ನೀಡಿ ಸರಕಾರವು ಅರಣ್ಯ ಪದವೀಧರರಿಗೆ ಮೀಸಲಾತಿಯನ್ನು ಶೇ.50ಕ್ಕೆ ಕಡಿತಗೊಳಿಸಿದೆ. ಅರಣ್ಯ ಇಲಾಖೆಯ ಹುದ್ದೆಗಳಾದ ಎಸಿಎಫ್, ಆರ್‍ಎಫ್‍ಒ, ಡಿವೈಆರ್‍ಎಫ್‍ಒಗಳಿಗೆ ನೀಡುವ ತರಬೇತಿಯ ಪಠ್ಯಕ್ರಮವನ್ನು ನಾವು 4 ವರ್ಷದ ಪದವಿಯಲ್ಲೇ ಬಹುಪಾಲು ಕಲಿತಿರುತ್ತೇವೆ ಎಂದು ವಿದ್ಯಾರ್ಥಿಗಳು ತಿಳಿಸಿದರು.
ಸಿಇಟಿ ಪರೀಕ್ಷೆಯಲ್ಲಿ ಸರಿ ಸುಮಾರು 5ರಿಂದ 6ಸಾವಿರ ಶ್ರೇಣಿಯೊಂದಿಗೆ ಪದವಿ ಪಡೆದ ವಿದ್ಯಾರ್ಥಿಗಳು ಅರಣ್ಯ ಇಲಾಖೆಯ ಹುದ್ದೆಗಳಿಗೆ ಅನರ್ಹರೇ? ಅರಣ್ಯ ಇಲಾಖೆಯ ಹುದ್ದೆಗಳ ತರಬೇತಿಗಳಲ್ಲಿ ಚಿನ್ನದ ಪದಕಗಳನ್ನು ಪಡೆದ ಅದೆಷ್ಟೋ ಅರಣ್ಯ ಪದವೀಧರರು ಅಪ್ರಯೋಜಕರೇ?. ಶೇ.60-70ರಷ್ಟು ಕೃಷಿ ಹಾಗೂ ತೋಟಗಾರಿಕೆ ವಿಷಯವು ಅರಣ್ಯ ಪದವಿಯ ಪಠ್ಯಕ್ರಮದಲ್ಲಿ ಒಳಪಟ್ಟರೂ ಸಹ ನಾವು ಯಾಕೆ ಆಯಾ ಮಾತೃ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸಲು ಯೋಗ್ಯರಲ್ಲ ಎಂದು ಧರಣಿನಿರತರು ಪ್ರಶ್ನಿಸಿದರು.
ಅರಣ್ಯ ಪದವಿಯನ್ನೇ ಮಾಡಿ, ಅರಣ್ಯದ ಹಾವಭಾವನ್ನು ಅರಿತಿರುವ ಮಾನವ ಸಂಪನ್ಮೂಲಗಳಿಗೆ ಅರಣ್ಯ ಸೇವೆಗೆ ಅವಕಾಶ ನೀಡದಿರುವುದು ಖಂಡನೀಯ. ಸರಕಾರ ಅರಣ್ಯ ಪದವೀಧರರಿಗೆ ಕಾಡಿನ ಸಂರಕ್ಷಣೆಗೆ ಹಾಗೂ ವೈಜ್ಞಾನಿಕ ನಿರ್ವಹಣೆಗೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಧರಣಿಯಲ್ಲಿ ಅರಣ್ಯಶಾಸ್ತ್ರ ವಿದ್ಯಾರ್ಥಿಗಳಾದ ದೀಕ್ಷಿತ್ ಎಂ.ಬಿ, ಅಕ್ಷಯ್ ಕುಮಾರ್, ಸುದೀಪ್ ಸಿರಿಗೌಡ, ಅಂಕಿತ್ ದೇವರಾಯ ಮತ್ತಿತರರು ಹಾಜರಿದ್ದರು.







